newsics.com
ಉಡುಪಿ: ಪ್ರಿಯಕರನ ಜೊತೆ ಸೇರಿ ಪತಿಗೆ ಸ್ಲೋ ಪಾಯಿಸನ್ ನೀಡಿ ಪತ್ನಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ.
ಬಾಲಕೃಷ್ಣ(44) ಹತ್ಯೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಸದ್ಯ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿನಗೂ ಮುನ್ನ ಕಳೆದ 25 ದಿನದಿಂದ ಜ್ವರ, ವಾಂತಿಯಿಂದ ಬಾಲಕೃಷ್ಣ ಬಳಲುತ್ತಿದ್ದರು. ಕೆಎಂಸಿ, ನಿಮ್ಹಾನ್ಸ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದ ಹಿನ್ನೆಲೆ ಬಾಲಕೃಷ್ಣನನ್ನು ಮನೆಗೆ ಕರೆತರಲಾಗಿತ್ತು. ಅಕ್ಟೋಬರ್ 20ರ ತಡರಾತ್ರಿ ಮೃತಪಟ್ಟಿದ್ದಾರೆ.
ಬಳಿಕ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರತಿಮಾಳ ಸಹೋದರನೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ತನಿಖೆ ವೇಳೆ ಪ್ರತಿಮಾ ಮತ್ತು ಆಕೆಯ ಪ್ರಿಯಕರನ ದಿಲೀಪ್ ಮೇಲೆ ಸಂಶಯ ವ್ಯಕ್ತವಾಗಿ ವಿಚಾರಣೆಗೆ ಒಳಪಡಿಸಲಾಯಿತು.
ಬಾಲಕೃಷ್ಣ ಸಾವಿನ ಬಳಿಕ ಪತ್ನಿ ಪ್ರತಿಮಾನ ಚಲನವಲನ ಬಗ್ಗೆ ಆಕೆಯ ಸಹೋದರನೇ ಅನುಮಾನಗೊಂಡಿದ್ದ. ಸಾವಿನ ಬಗ್ಗೆ ಆಕೆಯನ್ನು ಪ್ರಶ್ನಿಸಿದ್ದಾನೆ. ಪ್ರತಿಮಾ ತನ್ನ ಸಹೋದರನ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಊಟದಲ್ಲಿ ವಿಷ ಬೆರೆಸಿ ಬಳಿಕ ಬೆಡ್ಶೀಟ್ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪ್ರತಿಮಾ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಪ್ರಿಯಕರನ ಜೊತೆ ಸೇರಿಕೊಂಡು ಪತಿ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆಂದು ತಿಳಿದುಬಂದಿದೆ.