newsics.com
ಬೆಂಗಳೂರು: ವಿದ್ಯುತ್ ಸಂಪರ್ಕ ನೀಡಲು 16.50 ಲಕ್ಷ ರೂ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಬೆಸ್ಕಾಂ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನೂತನ ವಸತಿ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹16 ಲಕ್ಷ ಲಂಚ ಪಡೆಯುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿ ಬೆಸ್ಕಾಂ ಕಚೇರಿಯ ಎಇಇ ಮತ್ತು ಜೆಇಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರದ ಆವಲಹಳ್ಳಿ ವ್ಯಾಪ್ತಿಯ ಬೊಮ್ಮನಹಳ್ಳಿಯ ಮುತ್ತುಸ್ವಾಮಿ ಅವರು ತಮ್ಮ ಜಮೀನಿನಲ್ಲಿ ವಸತಿ ಬಡಾವಣೆ ನಿರ್ಮಿಸಿದ್ದರು. ಬಡಾವಣೆಯ ವಿದ್ಯುತ್ ಸಂಪರ್ಕ ಮತ್ತಿತರ ಕೆಲಸಗಳನ್ನು ಶ್ರೀ ಚಕ್ರ ಎಲೆಕ್ಟಿಕಲ್ಸ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿದ್ದರು.
ಸಂಸ್ಥೆಯ ವ್ಯವಸ್ಥಾಪಕ ವಿಜಯ್ ಕುಮಾರ್, ವಿದ್ಯುತ್ ಸಂಪರ್ಕ ಸಂಬಂಧ ಕೆಲಸಗಳಿಗಾಗಿ ಬೆಸ್ಕಾಂನ ಆವಲಹಳ್ಳಿ ಕಚೇರಿಯ ಎಇಇ ರಮೇಶ್ ಬಾಬು ಅವರನ್ನು ಸೆಪ್ಟೆಂಬರ್ 25ರಂದು ಭೇಟಿ ಮಾಡಿದ್ದರು. ಎಲ್ಲ ಕೆಲಸಗಳಿಗೆ ಎಷ್ಟು ಶುಲ್ಕವಾಗುತ್ತದೆ ಎಂದು ಕೇಳಿದ್ದರು. ಆಗ ರಮೇಶ್ ಬಾಬು, ‘ಜೆಇ ನಾಗೇಶ್ ಅವರನ್ನು ಭೇಟಿ ಮಾಡಿ, ಅವರು ಮಾಹಿತಿ ನೀಡುತ್ತಾರೆ. ಅಲ್ಲಿಯವರೆಗೆ ನಿಮ್ಮ ಕಡತ ಹಾಗೇ ಇರುತ್ತದೆ’ ಎಂದು ತಿಳಿಸಿದ್ದರು.
ಅದರಂತೆ ರಮೇಶ್ ಬಾಬು ಅವರು ನಾಗೇಶ್ ಅವರನ್ನು ಭೇಟಿ ಮಾಡಿದಾಗ, ₹16.50 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿಜಯ್‌ಕುಮಾರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಪ್ರಕಾರ ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ್ ಅವರ ತಂಡವು ದಾಳಿ ನಡೆಸಿ ನಾಗೇಶ್ ಮತ್ತು ರಮೇಶ್ ಅವರನ್ನು ಬಂಧಿಸಿತು.