newsics.com
ನವದೆಹಲಿ: ಇಸ್ರೇಲ್-ಇರಾನ್, ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವಾಗಲೇ, ರಷ್ಯಾ- ಅಮೆರಿಕ, ರಷ್ಯಾ-ಇಸ್ರೇಲ್, ಉತ್ತರ ಕೊರಿಯಾ- ದಕ್ಷಿಣ ಕೊರಿಯಾ ನಡುವೆಯೂ ಯುದ್ಧ ವಾತಾವರಣ ಸೃಷ್ಟಿಯಾಗಿದೆ.
ಯೆಮನ್ನಲ್ಲಿನ ಹೌತಿ ಉಗ್ರರ ಮೇಲೆ ಅಮೆರಿಕ ಗುರುವಾರ ವೈಮಾನಿಕ ದಾಳಿ ನಡೆಸಿದೆ. ಇದರ ಬೆನ್ನಲ್ಲೇ, ಅಮೆರಿಕ ಬೆಂಬಲಿತ ಪಡೆಗಳ ಮೇಲೆ ರಷ್ಯಾ, ಪುಟಿನ್ ಬೆಂಬಲಿಗರ ಮೇಲೆ ಇಸ್ರೇಲ್ ಕೂಡ ದಾಳಿ ನಡೆಸಿದೆ.
ಗುರುವಾರ ಬೆಳಗ್ಗೆ ಅಮೆರಿಕದ ವೈಮಾನಿಕ ಪಡೆಗಳು, ಯೆಮನ್ನಲ್ಲಿ ಬೀಡುಬಿಟ್ಟಿರುವ ಇರಾನ್ ಬೆಂಬಲಿತ ಹೌತಿ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿವೆ. ಹೌತಿ ಉಗ್ರರು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಸ್ಥಳಗಳನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಐದು ಸಂಗ್ರಹಾಗಾರಗಳನ್ನು ನಾಶ ಮಾಡಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಸರ್ಕಾರವೇ ಸ್ಪಷ್ಟಪಡಿಸಿದೆ.
ದಾಳಿಯಲ್ಲಿ ಅಮೆರಿಕದ ನೌಕಾಪಡೆ ಮತ್ತು ವೈಮಾನಿಕ ಪಡೆಗಳು ಜಂಟಿಯಾಗಿ ಪಾಲ್ಗೊಂಡಿವೆ. ದಾಳಿಗಾಗಿ ಬಿ-2 ಸ್ಪಿರಿಟ್ ಲಾಂಗ್ರೇಂಜ್ ಸ್ಟೆಲ್ತ್ ಬಾಂಬರ್ ವಿಮಾನ ಬಳಸಿಕೊಳ್ಳಲಾಗಿದೆ. ಇವು ಅತ್ಯಾಧುನಿಕ ಸಮರ ವಿಮಾನಗಳಾಗಿದ್ದು, ಯಾವುದೇ ಸಮಯದಲ್ಲಿ, ಯಾವುದೇ ಸ್ಥಳವನ್ನು ಗುರಿಯಾಗಿಸಿ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿವೆ.
ಈ ಮಧ್ಯೆ, ಅಮೆರಿಕ ದಾಳಿಯನ್ನು ಒಪ್ಪಿಕೊಂಡಿರುವ ಹೌತಿ ಉಗ್ರರು, ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಸಿರಿಯಾದಲ್ಲಿ ಬೀಡುಬಿಟ್ಟಿರುವ ಅಮೆರಿಕ ಮತ್ತು ರಷ್ಯಾ ಬೆಂಬಲಿಗರ ಮೇಲೂ ದಾಳಿ ನಡೆಸಲಾಗಿದೆ. ಸಿರಿಯಾ ಅಧ್ಯಕ್ಷ ಬಷರ್ ಅಸದ್ ವಿರೋಧಿ ಗುಂಪುಗಳಿಗೆ ಅಮೆರಿಕ ನೆರವು ನೀಡುತ್ತಿದೆ. ಈ ಗುಂಪುಗಳನ್ನು ಗುರಿಯಾಗಿಸಿ ಇದಿಲಿಬ್ನಲ್ಲಿ ರಷ್ಯಾ ದಾಳಿ ನಡೆಸಿದೆ. ಈ ವೇಳೆ 10 ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ.
ಇದರ ನಡುವೆಯೇ, ಸಿರಿಯಾ ಅಧ್ಯಕ್ಷ ಬಷರ್ ಅಸದ್ ಬೆಂಬಲಿಗರನ್ನು ಗುರಿಯಾಗಿಸಿ ಲಟಾಕಿಯಾದಲ್ಲಿ ಇಸ್ರೇಲ್ ದಾಳಿ ಮಾಡಿದೆ. ಅಸದ್ ಬೆಂಬಲಿಗರಿಗೆ ರಷ್ಯಾ ಬೆಂಬಲ ನೀಡುತ್ತಿದ್ದು, ಲಟಾಕಿಯಾ ಕೂಡ ರಷ್ಯಾ ಏರ್ಬೇಸ್ ಸಮೀಪವೇ ಇದೆ. ರಷ್ಯಾ ಜತೆಗೆ ಇರಾನ್ ಕೂಡ ಅಸದ್ ಬೆಂಬಲಿಗರಿಗೆ ನೆರವು ನೀಡುತ್ತಿದ್ದು, ಇಸ್ರೇಲ್ ಆಗಾಗ ದಾಳಿ ನಡೆಸುತ್ತಲೇ ಇದೆ.
ಉತ್ತರ-ದಕ್ಷಿಣ ಕೊರಿಯಾ ಸಮರ
ಮಧ್ಯ ಪ್ರಾಚ್ಯದ ಬಳಿಕ, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ನಡುವೆ ಯುದ್ಧ ಭೀತಿ ಆರಂಭವಾಗಿದೆ.
ದಕ್ಷಿಣ ಕೊರಿಯಾ ಸಂಪರ್ಕಿಸುವ ಎಲ್ಲ ರಸ್ತೆಗಳು ಮತ್ತು ರೈಲ್ವೆ ಮಾರ್ಗಗಳನ್ನು ಉತ್ತರ ಕೊರಿಯಾ ನಾಶ ಮಾಡಿದೆ. ಅಷ್ಟೇ ಅಲ್ಲ, ದಕ್ಷಿಣ ಕೊರಿಯಾವನ್ನು ಶತ್ರು ದೇಶ ಎಂದು ಗುರುವಾರ ಘೋಷಣೆ ಮಾಡಿದೆ. ಜತೆಗೆ ಯುದ್ಧಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಉತ್ತರ ಕೊರಿಯಾ ಮಾಡಿಕೊಳ್ಳುತ್ತಿದೆ.