newsics.com
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದ್ದು, ಈ ಪೈಕಿ 1883 ಚಾಲಕ ಹಾಗೂ ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿಗೆ ನೇಮಕಾತಿ ಆದೇಶ ನೀಡಲಾಗಿದೆ. 6500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೆ ಪೂರ್ಣಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ – 2ರ ಆವರಣದಲ್ಲಿ ನಿಗಮದ 63ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬುಧವಾರ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಿಗೆ ಹಾಗೂ ನಿಗಮದಲ್ಲಿ ಇದೇ ಮೊದಲ ಬಾರಿ ಪುನಶ್ಚೇತನಗೊಳಿಸಿದ ಐರಾವತ ಕ್ಲಬ್ ಕ್ಲಾಸ್ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಿಂದ ಕಾರ್ಮಿಕರು ಸಂತೃಪ್ತಿಯಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗಿರುವುದಾಗಿ ತಿಳಿಸಿದರು.
ನಾಲ್ಕು ವರ್ಷಗಳಿಂದ ಯಾವುದೇ ಅನುಕಂಪದ ಆಧಾರದಲ್ಲಿ ನೇಮಕಾತಿ ನಡೆದಿರುವುದಿಲ್ಲ. ಕಳೆದ 18 ತಿಂಗಳಲ್ಲಿ 1000 ಮೃತರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನೀಡಲಾಗಿದೆ. ಸರ್ಕಾರವು 5800 ನೂತನ ವಾಹನಗಳನ್ನು ಸೇರ್ಪಡೆ ಮಾಡಲು ಅನುಮತಿಸಿದ್ದು, ಇದುವರೆಗೆ 3417 ವಾಹನಗಳನ್ನು ಸೇರಿಸಲಾಗಿದೆ. ನಿಗಮವು ನೂತನವಾಗಿ ಜಾರಿಗೊಳಿಸಿದ ವಾಹನಗಳ ಪುನಶ್ಚೇತನ ಕಾರ್ಯವು ನೂತನ ಬಸ್ಸುಗಳನ್ನು ಸೇರ್ಪಡೆ ಮಾಡುವಲ್ಲಿ ಉಂಟಾಗಿರುವ ವಿಳಂಬದ ಕೊರತೆಯನ್ನು ತುಂಬಿದ್ದು, ಈ ಬಸ್ಸುಗಳು ನಾಲ್ಕು ಲಕ್ಷ ಕಿಮೀವರೆಗೆ ಕಾರ್ಯಾಚರಣೆ ಮಾಡಬಹುದಾಗಿರುತ್ತದೆ ಎಂದರು.
ಕೆಎಸ್ಆರ್ಟಿಸಿ ಅಧ್ಯಕ್ಷ, ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಶಕ್ತಿ ಯೋಜನೆ ಜಾರಿಗೆ ಬರುವ ಮುನ್ನ ಪ್ರತಿದಿನ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿದ್ದ 158909 ಟ್ರಿಪ್ಗಳ ಪ್ರಮಾಣವು 172333 ಗೆ ಹೆಚ್ಚಳ, ಪ್ರತಿ ದಿನ 13424 ಹೆಚ್ಚುವರಿ ಟ್ರಿಪ್ಪುಗಳ ಕಾರ್ಯಾಚರಣೆ ಮಾಡಲಾಗಿದೆ ಎಂದರು.
ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಎಂಡಿ ವಿ. ಅನ್ಬುಕುಮಾರ್, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್, ನಿರ್ದೇಶಕಿ
ಡಾ. ನಂದಿನಿದೇವಿ ಕೆ. ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರಿನ ಲಾಡ್ಜ್ನಲ್ಲಿ ತೀರ್ಥಹಳ್ಳಿ ತಹಸೀಲ್ದಾರ್ ಶವ ಪತ್ತೆ, ಸಾವಿಗೇನು ಕಾರಣ?
ಕೇಂದ್ರ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ಖುಷಿ ಸುದ್ದಿ: ಶೇ.3 ತುಟ್ಟಿಭತ್ಯೆ ಹೆಚ್ಚಳ