newsics.com
ತಿರುಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಡ್ರಾಲಿಕ್ ಸಮಸ್ಯೆ ಉಂಟಾಗಿದ್ದು, ಸತತ ಮೂರು ಗಂಟೆ ಕಾಲ ಆಕಾಶದಲ್ಲೇ ಗಿರಕಿ ಹೊಡೆಸಿ ವಿಮಾನವನ್ನು ತಿರುಚ್ಚಿ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.
ಲ್ಯಾಂಡಿಂಗ್ ಗೇರ್ ಸರಿಯಾಗಿ ಕಾರ್ಯನಿರ್ವಹಿಸದ್ದರಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡಲಾಗದೆ ಪರದಾಡುವಂತಾಯಿತು. ವಿಮಾನದಲ್ಲಿದ್ದ 140 ಪ್ರಯಾಣಿಕರ ಆತಂಕ ಹೇಳತೀರದಾಗಿತ್ತು.
ತುರ್ತು ಭೂಸ್ಪರ್ಶ ಮಾಡುವ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಇಂಧನವನ್ನು ಖಾಲಿ ಮಾಡುವ ಸಲುವಾಗಿ ಪೈಲಟ್ ಗಳು ಆಗಸದಲ್ಲೇ ವಿಮಾನವನ್ನು ಹಾರಾಡಿಸುತ್ತಿದ್ದಾರೆ.
ಲ್ಯಾಂಡಿಂಗ್ ಸಮಯದಲ್ಲಿ ಬೆಂಕಿಯ ಅಪಾಯವನ್ನು ತಪ್ಪಿಸಲು, ವಿಮಾನದಲ್ಲಿನ ಇಂಧನ ಲೋಡ್ ಅನ್ನು ಕಡಿಮೆ ಮಾಡಿದ ನಂತರ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದ್ದು, ಯಶಸ್ವಿಯಾಗಿ ಲ್ಯಾಂಡಿಂಗ್ ಸಾಧ್ಯವಾಯಿತು.
ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳು ಮತ್ತು ಅಗ್ನಿಶಾಮಕ ವಾಹನಗಳನ್ನು ಸ್ಟ್ಯಾಂಡ್ಬೈನಲ್ಲಿ ಇರಿಸಲಾಗಿತ್ತು.
ಸಂಜೆ 5.43ರ ಸುಮಾರಿಗೆ ವಿಮಾನ ಟೇಕ್ ಆಫ್ ಆಗಿತ್ತು. ನಂತರ ವಿಮಾನದಲ್ಲಿ ಹೈಡ್ರಾಲಿಕ್ ಸಮಸ್ಯೆ ಪತ್ತೆಯಾದ ಕೂಡಲೇ ಪೈಲಟ್ ಗಳು ವಿಮಾನವನ್ನು ಮತ್ತು ತಿರುಚಿಗೆ ಡೈವರ್ಟ್ ಮಾಡಲಾಗಿದ್ದು ಸುರಕ್ಷಿತ ಲ್ಯಾಂಡಿಂಗ್ಗಾಗಿ ಪ್ರಯತ್ನಿಸಲಾಯಿತು.
ವಿಮಾನ ನಿಲ್ದಾಣದ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದರು.