newsics.com
ಹಾಸನ: ಇಲ್ಲಿನ ಇತಿಹಾಸ ಪ್ರಸಿದ್ಧ ಹಾಸನಾಂಬಾ ದೇವಾಲಯದ ಬಾಗಿಲು ಅಕ್ಟೋಬರ್ 24ರಂದು ತೆರೆಯಲಿದೆ. ನವೆಂಬರ್ 3ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ ನಡೆಯಲಿದೆ.
ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬಾ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸುವಂತೆ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಶ್ರೀ ಹಾಸನಾಂಬಾ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ-2024 ಪೊಸ್ಟರ್ ಬಿಡುಗಡೆ ಮಾಡಿದ ಸಚಿವ ರಾಜಣ್ಣ, ಒಟ್ಟು 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿಗಿಂತ ನಾಲ್ಕು ಲಕ್ಷ ಹೆಚ್ಚು ಭಕ್ತರು ಆಗಮಿಸುವುದರೊಂದಿಗೆ ಸುಮಾರು 20 ಲಕ್ಷ ಭಕ್ತರ ಆಗಮನ ನಿರೀಕ್ಷೆ ಹೊಂದಲಾಗಿದೆ ಎಂದರು.
ಮೈಸೂರು ದಸರಾದಂತೆ ವಿದ್ಯುತ್ ಅಲಂಕಾರ, ಹೂವಿನ ಅಲಂಕಾರಕ್ಕೆ ಕ್ರಮವಹಿಸಿ ಸಣ್ಣ ಪುಟ್ಟ ಲೋಪದೋಷಗಳು ಆಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬೇಲೂರು-ಹಳೇಬೀಡಿನಲ್ಲಿ ಯಾತ್ರಿಕರಿಗೆ ಅನುಕೂಲವಾಗುವಂತೆ ಶೌಚಾಲಯ ವ್ಯವಸ್ಧೆಗೆ ಕ್ರಮವಹಿಸಲು ಸೂಚಿಸಿದರು.
ವಿಶೇಷ ದರ್ಶನ ಟಿಕೆಟ್‌ಗೆ ಲಾಡು ಪ್ರಸಾದ: ಈ ಬಾರಿ 1000 ಹಾಗೂ 300 ರೂ.ಗಳ ವಿಶೇಷ ದರ್ಶನದ ಪಾಸ್ ಗಳಿಗೆ ಲಾಡು ಪ್ರಸಾದ ನೀಡುವ ಕುರಿತು ತೀರ್ಮಾನಿಸಲಾಯಿತು. ವಿಶೇಷ ದರ್ಶನದ 1000 ರೂ. ಪಾಸಿಗೆ ಎರಡು ಹಾಗೂ 300 ರೂ. ಪಾಸ್‌ಗೆ ಒಂದು ಲಾಡನ್ನು ನೀಡಲು ನಿರ್ಧರಿಸಲಾಗಿದೆ. ಇಸ್ಕಾನ್ ಸಂಸ್ಥೆಯಿಂದ ಲಾಡು ಪ್ರಸಾದ ತಯಾರಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸರತಿ ಸಾಲಿನಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ತಾಸುಗಟ್ಟಲೆ ನಿಲ್ಲುವ ಭಕ್ತಾದಿಗಳಿಗೆ ನೀರು ಹಾಗೂ ಮಜ್ಜಿಗೆ ಪೂರೈಕೆಯನ್ನು ಈ ಬಾರಿಯೂ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಖಾಸಗಿ ಕಂಪನಿಗಳಿಗೆ 3000 ಲೀಟರ್ ನೀರು ಪೂರೈಸಲು ಹಾಗೂ ಸ್ಥಳೀಯ ಕೆಎಂಎಫ್ ಡೈರಿಯಲ್ಲಿ ಮಜ್ಜಿಗೆ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಭಕ್ತಾದಿಗಳು ಸಾಗುವ ಮಾರ್ಗದಲ್ಲಿ ನೇರದರ್ಶನ ವ್ಯವಸ್ಥೆಗೆ ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ. ಈ ಮೂಲಕ ದೇವಿಯ ಪೂಜೆಯ ನೇರ ಪ್ರಸಾರವನ್ನು ಮಾಡಲಾಗುತ್ತಿದೆ ಎಂದರು.
ಪೂಜಾ ಅವಧಿ ಕಡಿತಕ್ಕೆ ಮನವಿ:
ಈ ಬಾರಿ ದರ್ಶನೋತ್ಸವ ಕೇವಲ ಒಂಬತ್ತು ದಿನ ಮಾತ್ರ ದಿನದ 24 ಗಂಟೆ ದರ್ಶನಕ್ಕೆ ಅವಕಾಶ ಇರುವುದರಿಂದ ಧಾರ್ಮಿಕ ವಿಧಿ ವಿಧಾನಕ್ಕೆ ಧಕ್ಕೆ ಆಗದಂತೆ ಪೂಜೆ ಸಮಯ ಕಡಿತ ಮಾಡುವಂತೆ ಅರ್ಚಕರಿಗೆ ಕೋರಲಾಗುವುದು. ಇದರಿಂದ ಒಂಬತ್ತು ದಿನದಲ್ಲಿ ದಿನಂಪ್ರತಿ ಎರಡು ಗಂಟೆ ಸಮಯ ಉಳಿದರು 18 ಗಂಟೆ ಹೆಚ್ಚುವರಿ ಸಮಯ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ರಾಜಣ್ಣ ಹೇಳಿದರು.
ಟೂರ್ ಪ್ಯಾಕೇಜ್:
ಹೆಲಿ ಟೂರಿಸಂ ಕಳೆದ ಬಾರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಪ್ರವಾಸದ ಪ್ಯಾಕೇಜ್ ಇರಲಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.
ಹೆಲಿಕಾಪ್ಟರ್ ಮೂಲಕ ಹಾಸನ ನಗರ ಹಾಗೂ ಹಾಸನಾಂಬಾ ದೇವಾಲಯ ಸುತ್ತ ಪ್ರಯಾಣ ಮಾಡಲು ಈ ಬಾರಿಯೂ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಮುಡಾ ಕೇಸ್: 14 ಸೈಟ್ ಮುಡಾಗೆ ಹಿಂದಿರುಗಿಸುವುದಾಗಿ ಸಿಎಂ ಪತ್ನಿ ಪತ್ರ!