newsics.com
ಮೈಸೂರು: ದಸರಾ ಮಹೋತ್ಸವಕ್ಕೆ ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಆಸನಗಳ ಸಮಸ್ಯೆ ಆಗುತ್ತಿದೆ. ಆದ್ದರಿಂದ ಈ ಬಾರಿ ಜಂಬೂಸವಾರಿ ಮಾರ್ಗ ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಈ ಬದಲಾವಣೆಯಿಂದ 10 ರಿಂದ 15 ಸಾವಿರ ಆಸನಗಳು ಹೆಚ್ಚಾಗಲಿವೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಅರಮನೆ ಆವರಣದಲ್ಲಿ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಈ ಬಾರಿ ಕೆಲವು ಮಾರ್ಪಾಡು ಮಾಡಲು ನಿರ್ಧರಿಸಿದ್ದು, ಸುಮಾರು 500 ಮೀಟರ್ ಹೆಚ್ಚಾಗಲಿದೆ. ಇದರಿಂದ ಆಸನಗಳ ಸಂಖ್ಯೆಯೂ ಹೆಚ್ಚಾಗಲಿದ್ದು, ಅರಮನೆ ಆವರಣದಲ್ಲಿ 35 ರಿಂದ 40 ಸಾವಿರ ಆಸನಗಳ ವ್ಯವಸ್ಥೆ ಮಾಡಬಹುದಾಗಿದೆ ಎಂದರು.
ದಸರಾ ಆಚರಣೆಗೆ 19 ಉಪಸಮಿತಿಗಳನ್ನು ರಚಿಸಲಾಗಿದೆ. ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಉತ್ಸವ ನಡೆಸಲು ಜವಾಬ್ದಾರಿಯುತವಾಗಿ, ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಇಷ್ಟು ದೊಡ್ಡ ಹಬ್ಬ ಆಚರಣೆ ಮಾಡುವಾಗ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ. ಎಲ್ಲವನ್ನು ಸರಿದೂಗಿಸಿಕೊಂಡು ಅದ್ಧೂರಿಯಾಗಿ ದಸರಾ ಆಚರಣೆ ಮಾಡುತ್ತೇವೆ. ಮುಖ್ಯಮಂತ್ರಿಗಳು ಕೇಂದ್ರ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದು ಅನುಮತಿ ದೊರೆತರೆ ಏರ್ ಶೋ ಮಾಡುತ್ತೇವೆ ಎಂದರು.