newsics.com
ಬೆಂಗಳೂರು: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಗೃಹಿಣಿ ಸಾವನ್ನಪ್ಪಿರುವ ದಾರುಣ ಘಟನೆ ಹುಳಿಮಾವಿನ ಅಕ್ಷಯನಗರದಲ್ಲಿ ನಡೆದಿದೆ. ಅನುಷಾ ಮೃತ ಮಹಿಳೆ. ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಅನುಷಾ ಇಂದು ಸಾವನ್ನಪ್ಪಿದ್ದಾರೆ.
ಮೃತ ಅನುಷಾ ಅವರಿಗೆ 5 ವರ್ಷದ ಹಿಂದೆ ಶ್ರೀಹರಿ ಎಂಬಾತನ ಜೊತೆಗೆ ವಿವಾಹವಾಗಿತ್ತು. ಈ ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ. ಗಂಡನ ಮೇಲೆ ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಅನುಷಾ ಬಾತ್ ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಗಂಡನ ಜೊತೆ ಜಗಳ ಮಾಡುತ್ತಿದ್ದ ಅನುಷಾಗೆ ಶ್ರೀಹರಿ ಡಿವೋರ್ಸ್ ಕೊಡುವಂತೆ ಪೀಡಿಸುತ್ತಿದ್ದ. ಎರಡು ದಿನದ ಹಿಂದೆ ಅನುಷಾ, ಶ್ರೀಹರಿಗೆ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಿದ್ದಾಳೆ. ಗಂಡ ಶ್ರೀಹರಿ ವಿಡಿಯೋ ಕಾಲ್‌ನಲ್ಲಿರುವಾಗಲೇ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾಳೆ ಎನ್ನಲಾಗಿದೆ.