newsics.com | ನ್ಯೂಸಿಕ್ಸ್
ಬೆಂಗಳೂರು: ನಗರವನ್ನು ಸ್ವಚ್ಛವಾಗಿಡಲು ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆರಂಭಿಸಲಾಗಿದ್ದು, ಆಗಸ್ಟ್ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಚ್ಚರಿಕೆ ನೀಡಿದೆ. ತಪ್ಪಿದರೆ ದಂಡ ಹಾಗೂ ಆಸ್ತಿ ತೆರಿಗೆಯೊಂದಿಗೆ ತೆರವು ವೆಚ್ಚ ವಸೂಲಿ ಮಾಡಲಾಗುವುದು.
ಖಾಲಿ ಜಾಗಗಳ ಮಾಲೀಕರಿಗೆ ಕಠಿಣ ನಿಯಮಗಳು
ಘನತ್ಯಾಜ್ಯ ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಪ್ರತಿಯೊಬ್ಬ ಖಾಲಿ ನಿವೇಶನದ ಮಾಲೀಕರು ತಮ್ಮ ಜಾಗವನ್ನು ಸ್ವಚ್ಛವಾಗಿ ಕಾಯ್ದುಕೊಳ್ಳುವುದು ಕಾನೂನುಬದ್ಧ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರವು ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ:
- ಜಮೀನು ಅಥವಾ ನಿವೇಶನಗಳಲ್ಲಿ ಬಿದ್ದಿರುವ ಕಸ ಹಾಗೂ ಡೆಬ್ರಿಸ್ ಅನ್ನು ಮಾಲೀಕರು ಆಗಸ್ಟ್ 15, 2026ರ ಒಳಗೆ ಕಡ್ಡಾಯವಾಗಿ ತೆರವುಗೊಳಿಸತಕ್ಕದ್ದು.
- ಒಂದು ವೇಳೆ ನಿಗದಿತ ಗಡುವು ಮೀರಿದರೆ, ಪಾಲಿಕೆಯಿಂದಲೇ ಸ್ವಚ್ಛತಾ ಕಾರ್ಯ ನಡೆಸಿ ಅದಕ್ಕೆ ತಗಲುವ ಖರ್ಚನ್ನು ಆಸ್ತಿ ತೆರಿಗೆಯ ಜೊತೆ ಸೇರಿಸಿ ವಸೂಲಿ ಮಾಡಲಾಗುವುದು. ಜತೆಗೆ ನಿಯಮ ಮೀರಿದವರಿಗೆ ಮೊದಲ ಬಾರಿ ರೂ. 25,000 ಹಾಗೂ ಮುಂದಿನ ಉಲ್ಲಂಘನೆಗಳಿಗೆ ರೂ. 50,000ದಿಂದ ರೂ. 1,00,000ದವರೆಗೆ ಭಾರಿ ದಂಡ ವಿಧಿಸಲಾಗುತ್ತದೆ.
ಸಾರ್ವಜನಿಕರಿಂದ ವಾಟ್ಸ್ ಆಪ್ ದೂರು ವ್ಯವಸ್ಥೆ
ನಿಗದಿತ ಅವಧಿಯೊಳಗೆ ಸ್ವಚ್ಛಗೊಳಿಸದ ಖಾಲಿ ಜಾಗಗಳ ಬಗ್ಗೆ ಸಾರ್ವಜನಿಕರು ಫೋಟೋ ಹಾಗೂ ಜಿಪಿಎಸ್ (GPS) ಸ್ಥಳದ ಮಾಹಿತಿಯೊಂದಿಗೆ +91-9448197197 ವಾಟ್ಸ್ ಆಪ್ ಚಾಟ್-ಬಾಟ್ ಸಂಖ್ಯೆಗೆ ದೂರು ಸಲ್ಲಿಸಬಹುದಾಗಿದೆ. ದೂರುದಾರರ ವೈಯಕ್ತಿಕ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು.
ಕಾಂಪೌಂಡ್ ನಿರ್ಮಿಸಲು ಮನವಿ
ನಿವೇಶನವನ್ನು ಸ್ವಚ್ಛಗೊಳಿಸಿದ ಬಳಿಕ ಮಾಲೀಕರು ಸುತ್ತಲೂ ಕಾಂಪೌಂಡ್ ಅಥವಾ ಬೇಲಿ ಹಾಕಿಕೊಳ್ಳುವ ಮೂಲಕ ಅಲ್ಲಿ ಯಾರೂ ಕಸ ಹಾಕದಂತೆ ನೋಡಿಕೊಳ್ಳಬೇಕು. ಸುಂದರ ಬೆಂಗಳೂರು ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿ ಜಿಬಿಎ ಕೋರಿದೆ.
Farmers Protest ಕಾವೇರಿ ನೀರು ಹರಿಸಲು CWRC ಆದೇಶ; ಮಂಡ್ಯದಲ್ಲಿ ಮುಗಿಲುಮುಟ್ಟಿದ ರೈತರ ಆಕ್ರೋಶ