newsics.com | ನ್ಯೂಸಿಕ್ಸ್
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದ ರಯಾನ್ ಟೆನ್ ಡಾಸ್ಚೇಟ್ ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸವೇ ರಾಷ್ಟ್ರೀಯ ತಂಡದೊಂದಿಗೆ ಅವರ ಕೊನೆಯ ಅಸೈನ್‌ಮೆಂಟ್ ಆಗಿತ್ತು. ಈ ಮೂಲಕ ತಂಡದೊಂದಿಗೆ ಅವರ ಎರಡು ವರ್ಷಗಳ ಸುದೀರ್ಘ ಕೋಚಿಂಗ್ ಪ್ರಯಾಣ ಅಂತ್ಯಗೊಂಡಿದೆ.
ರಯಾನ್ ಅವರ ಉತ್ತಮ ಕಾರ್ಯವೈಖರಿಯನ್ನು ಮೆಚ್ಚಿದ್ದ ಬಿಸಿಐ, ಅವರ ಒಪ್ಪಂದವನ್ನು 2027ರ ವಿಶ್ವಕಪ್‌ವರೆಗೂ ವಿಸ್ತರಿಸಲು ಮುಂದಾಗಿತ್ತು. ಆದರೆ, ಸಣ್ಣ ವಯಸ್ಸಿನ ಮಕ್ಕಳೊಂದಿಗೆ ಕಾಲ ಕಳೆಯಲು ಬಯಸುವ ರಯಾನ್, ನಿರಂತರ ಪ್ರಯಾಣ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನ ಬಿಡುವಿಲ್ಲದ ವೇಳಾಪಟ್ಟಿಯಿಂದ ದೂರ ಉಳಿಯಲು ನಿರ್ಧರಿಸಿ ಈ ಆಫರ್ ನಿರಾಕರಿಸಿದ್ದಾರೆ. ಅಲ್ಲದೆ, ತಮಗೆ ‘ವಿಶೇಷ ಫೀಲ್ಡಿಂಗ್ ಕೋಚ್’ ಹುದ್ದೆ ಸಿಗಬೇಕಿದ್ದರೂ ಅದು ಲಭ್ಯವಾಗದೆ ಸಾಮಾನ್ಯ ಸಹಾಯಕ ಕೋಚ್ ಆಗಿರಬೇಕಾಗಿ ಬಂದಿದ್ದು ಕೂಡ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಜುಲೈ 2024ರಲ್ಲಿ ತಂಡಕ್ಕೆ ಬಂದಿದ್ದ ರಯಾನ್, ಭಾರತದ 2025ರ ಏಷ್ಯಾ ಕಪ್ ಮತ್ತು 2026ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರೊಂದಿಗೆ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಕೂಡ ತಮ್ಮ ಅವಧಿ ಮುಗಿಸಿ ಹೊರನಡೆದಿದ್ದಾರೆ. ವರದಿಗಳ ಪ್ರಕಾರ ರಯಾನ್ ಶೀಘ್ರದಲ್ಲೇ ಐಪಿಎಲ್‌ನ ‘ಕೋಲ್ಕತ್ತಾ ನೈಟ್ ರೈಡರ್ಸ್’ (KKR) ತಂಡಕ್ಕೆ ಮರಳುವ ಸಾಧ್ಯತೆ ಇದೆ.
Talc Powder ಕ್ಯಾನ್ಸರ್ ವಿವಾದಕ್ಕೆ ಬ್ರೇಕ್; ಜಾನ್ಸನ್ ಅಂಡ್ ಜಾನ್ಸನ್‌ನಿಂದ ಬರೋಬ್ಬರಿ 46,000 ಕೋಟಿ ರೂ. ಪರಿಹಾರ