ಬೆಂಗಳೂರು: ಜನಪ್ರಿಯ ಆನ್‌ಲೈನ್ ಫುಡ್ ಡೆಲಿವರಿ ವೇದಿಕೆಯಾದ ‘ಸ್ವಿಗ್ಗಿ’ (Swiggy) ಇ ಕಾಮರ್ಸ್ ಆಯಪ್ ವಿರೋಧಿಸಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ತೀವ್ರ ಆಕ್ರೋಶ ಹೊರಹಾಕಿದೆ. ಹೋಟೆಲ್ ಉದ್ಯಮಿಗಳ ಬೆವರು ಹರಿದು ಗಳಿಸಿದ ಹಣವನ್ನು ಸ್ವಿಗ್ಗಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿರುವ ಸಂಘಟನೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಈ ಅನ್ಯಾಯವನ್ನು ತಡೆಯಬೇಕೆಂದು ಒತ್ತಾಯಿಸಿದೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸದಿದ್ದರೆ, ರಾಜಧಾನಿಯಲ್ಲಿ ಸ್ವಿಗ್ಗಿ ಸೇವೆಗಳನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಸ್ವಿಗ್ಗಿ ಆಪ್‌ನ ಆಡಳಿತ ವೈಖರಿಯಿಂದಾಗಿ ನಗರದ ಹೋಟೆಲ್‌ಗಳು ದಿನನಿತ್ಯ ಭಾರೀ ಆರ್ಥಿಕ ನಷ್ಟ ಎದುರಿಸುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಚರ್ಚಿಸಲು ಮತ್ತು ಮುಂದಿನ ಕಾನೂನು ಹಾಗೂ ಹೋರಾಟದ ಹಾದಿಯ ಬಗ್ಗೆ ನಿರ್ಧರಿಸಲು ಮಂಗಳವಾರ (ಜು.28) ಹೋಟೆಲ್ ಮಾಲೀಕರ ಸಂಘದ ತುರ್ತು ಸಭೆ ಕರೆಯಲಾಗಿದೆ.
ಹೋಟೆಲ್ ಉದ್ಯಮಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು
- ಮುನ್ಸೂಚನೆ ಇಲ್ಲದ ರಿಯಾಯಿತಿಗಳು: ಹೋಟೆಲ್ ಮಾಲೀಕರ ಪೂರ್ವಾನುಮತಿ ಅಥವಾ ಮಾಹಿತಿಯಿಲ್ಲದೆ ಸ್ವಿಗ್ಗಿ ಆಪ್‌ನಲ್ಲಿ ಗ್ರಾಹಕರಿಗೆ ವಿವಿಧ ಆಫರ್‌ಗಳನ್ನು ಘೋಷಿಸಲಾಗುತ್ತದೆ. ಉದಾಹರಣೆಗೆ, ಒಂದು ವಸ್ತುವಿನ ಮೇಲೆ ಮತ್ತೊಂದು ಉಚಿತ (BOGO) ಎಂದಾಗ, ಸ್ವಿಗ್ಗಿ ಕೇವಲ ಒಂದು ವಸ್ತುವಿನ ಹಣ ಮಾತ್ರ ಹೋಟೆಲ್‌ಗೆ ನೀಡುತ್ತಿದ್ದು, ಉಚಿತವಾಗಿ ಹೋದ ವಸ್ತುವಿನ ನಷ್ಟವನ್ನು ಹೋಟೆಲ್ ಮಾಲೀಕರೆ ಭರಿಸಬೇಕಾಗಿದೆ.
- ರದ್ದಾದ ಆರ್ಡರ್‌ಗಳಿಂದ ನಷ್ಟ: ಗ್ರಾಹಕರು ಆಹಾರ ಆರ್ಡರ್ ಮಾಡಿ, ಹೋಟೆಲ್‌ನಲ್ಲಿ ಅದೆಲ್ಲವೂ ತಯಾರಾಗಿ ಡೆಲಿವರಿ ಸಿಬ್ಬಂದಿಯ ಕೈಸೇರಿದ ನಂತರವೂ ಕೆಲವು ಆರ್ಡರ್‌ಗಳು ರದ್ದಾಗುತ್ತವೆ. ಹೀಗೆ ರದ್ದಾದ ಆಹಾರ ಹೋಟೆಲ್‌ಗೆ ವಾಪಸ್ ಬಾರದೆ ನಷ್ಟವಾಗುತ್ತಿದೆ.
- ಕಮಿಷನ್ ಕಡಿತ ಹಾಗೂ ವಿಳಂಬ ಪಾವತಿ: ಹೋಟೆಲ್‌ಗಳು ಅತ್ಯುತ್ತಮ ಗುಣಮಟ್ಟದ ಆಹಾರ ಒದಗಿಸಿದರೂ, ಅದಕ್ಕೆ ತಕ್ಕ ಹಣವು ನಿಗದಿತ ಸಮಯಕ್ಕೆ ಖಾತೆಗೆ ಜಮೆ ಆಗುತ್ತಿಲ್ಲ. ಜತೆಗೆ ಬಿಲ್ ಮೊತ್ತದಲ್ಲಿ ಅತಿಯಾದ ಕಮಿಷನ್ ಕಡಿತ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರಿನ ಹೋಟೆಲ್ ಮಾಲೀಕರು, ಮಂಗಳವಾರ ನಡೆಯಲಿರುವ ಸಭೆಯಲ್ಲಿ ಸ್ವಿಗ್ಗಿ ವಿರುದ್ಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಬೆಂಗಳೂರಿನಾದ್ಯಂತ ಸ್ವಿಗ್ಗಿ ಸೇವೆಗಳಿಗೆ ಸಂಪೂರ್ಣ ಬ್ರೇಕ್ ಬೀಳುವ ಸಾಧ್ಯತೆಯಿದೆ.
Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು