newsics.com | ನ್ಯೂಸಿಕ್ಸ್
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ, ತಂತ್ರಜ್ಞಾನಕ್ಕೆ ತಕ್ಕಂತೆ ಮಕ್ಕಳಿಗೆ ಕೌಶಲ ಜ್ಞಾನ ನೀಡುವ ಉದ್ದೇಶದಿಂದ ಇತ್ತೀಚೆಗೆ ಕಂಪ್ಯೂಟರ್ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಲಾಗಿದೆ.
ಈಗ ರಾಜ್ಯದ 1,642 ಪ್ರೌಢಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಷಯವನ್ನು ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ತಂತ್ರಜ್ಞಾನ ಬದಲಾದಂತೆ ಶಿಕ್ಷಣ ವ್ಯವಸ್ಥೆಯಲ್ಲೂ ಬೋಧನೆ, ಪಾಠ ಮಾಡುವ ವಿಷಯಗಳೂ ಸಹ ಬದಲಾವಣೆ ಆಗಬೇಕು. ಇದೇ ಕಾರಣಕ್ಕಾಗಿ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಕೌಶಲ ಜ್ಞಾನ ನೀಡಬೇಕು ಎಂಬ ಉದ್ದೇಶದಿಂದ ಸಮಗ್ರ ಶಿಕ್ಷಣ ಇಲಾಖೆ ಕೃತಕ ಬುದ್ಧಿಮತ್ತೆ ವಿಷಯವನ್ನು ಅನುಷ್ಠಾನಗೊಳಿಸುತ್ತಿದ್ದು, ಅದೂ ಸಹ ಇದೇ ವರ್ಷ 2026-27ನೇ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಎಐ ಕೋರ್ಸ್ ಆರಂಭಿಸುತ್ತಿದೆ.
1,642 ಶಾಲೆಗಳಲ್ಲಿ ಎಐ ಕೋರ್ಸ್
ಎಐ ವಿಷಯವನ್ನು 2026-27ನೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಅನುಮೋದಿತ 1,180 ಸರ್ಕಾರಿ ಪ್ರೌಢಶಾಲೆ ಗಳು, 2024-25 ಹಾಗೂ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಅನುಮೋದನೆಗೊಂಡಿರುವ 381 ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಷನ್ಸ್ ಪ್ರೇಮ್‌ವರ್ಕ್ (ಎನ್ ಎಸ್‌ಕ್ಯೂಎಫ್) ಶಾಲೆಗಳು ಹಾಗೂ 81 ಈಗಾಗಲೇ ಚಾಲ್ತಿಯಲ್ಲಿರುವ ಸಿಂಗಲ್ ಸೆಕ್ಟರ್ ಶಾಲೆಗಳು ಒಳಗೊಂಡು ಒಟ್ಟು 1,642 ಪ್ರೌಢ ಶಾಲೆಗಳಲ್ಲಿ ಕೃತಕ ಬುದ್ದಿ ಮತ್ತೆ ವಿಷಯ ಆರಂಭಿಸಲಾಗುತ್ತಿದೆ.
ಎಷ್ಟು ಶಾಲೆಗಳಲ್ಲಿ ಎಐ ಶಿಕ್ಷಣ?
- ಹೊಸದಾಗಿ ಅನುಮೋದಿತ ಸರಕಾರಿ ಪ್ರೌಢಶಾಲೆಗಳು: 1,180
- 2024 & 25, 2025 & 26ರಲ್ಲಿ ಅನುಮೋದನೆಗೊಂಡ ಎನ್‌ಎಸ್‌ಕ್ಯೂಎಫ್ ಶಾಲೆಗಳು: 381
- ಈಗಾಗಲೇ ಚಾಲ್ತಿಯಲ್ಲಿರುವ ಸಿಂಗಲ್ ಸೆಕ್ಟರ್ ಶಾಲೆಗಳು: 81
ಎಐ ಶಿಕ್ಷಣ ನೀಡುವ ಉದ್ದೇಶ?
ಸರ್ಕಾರಿ ಶಾಲಾ ಮಕ್ಕಳಲ್ಲಿ 21ನೇ ಶತಮಾನದ ಕೌಶಲಗಳು, ಸಮಸ್ಯೆ ಪರಿಹಾರ ಸಾಮರ್ಥ್ಯ, ಸೃಜನಶೀಲತೆ, ತಾಂತ್ರಿಕ ಜ್ಞಾನ ಹಾಗೂ ಉದ್ಯೋಗಾರ್ಹತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 2026-27 ಅನುಮೋದನೆ ಅನ್ವಯ ಎನ್‌ಎಸ್ ಕ್ಯೂಎಫ್ ಅಡಿಯಲ್ಲಿ ಆರಂಭಿಸಲಾಗುತ್ತಿದೆ. ಈ ಹಿಂದೆ ಬ್ಯೂಟಿ ಆ್ಯಂಡ್ ವೆಲ್‌ನೆಸ್, ರಿಟೇಲ್ ಹಾಗೂ ಫ್ಯಾಷನ್ ಡಿಸೈನ್ ಕೌಶಲ ವಿಷಯಗಳನ್ನು ಕಲಿಸಲಾಗುತಿತ್ತು. ಈಗ ಇವುಗಳ ಬದಲಿಗೆ ಎಐ ಕಲಿಸಲಾಗುತ್ತಿದೆ. ಅದೂ ಸಹ ಪ್ರೌಢಶಾಲೆಯಲ್ಲಿ ತೃತೀಯ ಭಾಷೆ ವಿಷಯದ ಬದಲಿಗೆ ಈ ಕೌಶಲ ಶಿಕ್ಷಣ ನೀಡಲಾಗುತ್ತಿದೆ.
ಶಾಲೆಗೊಬ್ಬ ಎಐ ಅತಿಥಿ ಶಿಕ್ಷಕ
ಪ್ರತಿ ಶಾಲೆಗೊಬ್ಬ ಎಐ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ನೇಮಕಾತಿಯನ್ನು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಿ ಅರ್ಜಿ ಆಹ್ವಾನಿಸಿ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್/ಇನ್ ಫಾರ್ಮೇಷನ್ ಟೆಕ್ನಾಲಜಿ ಅಥವಾ ಬಿಸಿಎ, ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಬಿಎಸ್ಪಿ ಇನಫಾರ್ಮೇಷನ್ ಟೆಕ್ನಾಲಜಿ ಅಥವಾ ಪಿಜಿಡಿಸಿಎ ಅಥವಾ ಡಿಬಿಇಎಸಿಸಿ ಎಲೆವೆಲ್ ಪ್ರಮಾಣಪತ್ರ ಹೊಂದಿದವರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.
ಜು.28ರೊಳಗೆ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ತಿಳಿಸಿದೆ. ತಿಂಗಳಿಗೆ ಈ ಶಿಕ್ಷಕರಿಗೆ 20 ಸಾವಿರ ಗೌರವಧನ ಪಾವತಿಸಲಾಗುತ್ತದೆ. ಆಗಸ್ಟ್ ಮೊದಲ ವಾರದಲ್ಲಿ ಎಐ ಅತಿಥಿ ಶಿಕ್ಷಕರಿಗೆ ಟ್ರೇನಿಂಗ್ ನೀಡಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾಧಿಕಾರಿಗಳು ಸೂಚಿಸಿದ್ದಾರೆ.
CJP withdraws protest ಬೇಡಿಕೆ ಈಡೇರಿಸಿದ ಕೇಂದ್ರ, ಪ್ರತಿಭಟನೆ ಹಿಂಪಡೆದ CJP
Crime Case ಸಾಲದ ಕಿರುಕುಳಕ್ಕೆ ಮನನೊಂದು ಕೃಷಿ ಹೊಂಡಕ್ಕೆ ಹಾರಿ ತಾಯಿ, ಮಕ್ಕಳು ಸಾ*ವು