newsics.com | ನ್ಯೂಸಿಕ್ಸ್
ಕೋಲಾರ: ಸಾಲಬಾಧೆ ಮತ್ತು ಸಾಲಗಾರರ ತೀವ್ರ ಕಿರುಕುಳಕ್ಕೆ ಮನನೊಂದು, ತಾಯಿ ಹಾಗೂ ಇಬ್ಬರು ಮಕ್ಕಳು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಬಳಿಯ ಕೃಷಿ ಹೊಂಡದಲ್ಲಿ ಕಳೆದ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಬೆಗ್ಲಿಬೆಣಜೇನಹಳ್ಳಿ ಗ್ರಾಮದ ನಿವಾಸಿ ಪ್ರಮೀಳಾ (40), ಇವರ ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಮೃತ ದುರ್ದೈವಿಗಳು.
ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಸುಮಾರು 15 ಲಕ್ಷ ರೂಪಾಯಿಗಳಿಗೂ ಅಧಿಕ ಕೈ ಸಾಲ ಮಾಡಿಕೊಂಡಿದ್ದ ಕುಟುಂಬವು, ಖಾಸಗಿ ಫೈನಾನ್ಸ್ ಸಿಬ್ಬಂದಿ ಹಾಗೂ ವಿವಿಧ ಸಂಘಗಳ ಸಾಲಗಾರರ ಒತ್ತಡಕ್ಕೆ ಸಿಲುಕಿತ್ತು. ಸಾಲ ತೀರಿಸುವಂತೆ ಪದೇಪದೆ ಬರುತ್ತಿದ್ದ ಕಿರುಕುಳದಿಂದ ನೊಂದಿದ್ದ ಪ್ರಮೀಳಾ, ನಿನ್ನೆ ರಾತ್ರಿ ಮನೆಯಲ್ಲಿ ಪತಿ ಸುರೇಶ್ ಜತೆ ಜಗಳವಾಡಿಕೊಂಡಿದ್ದರು. ನಂತರ ರಾತ್ರಿ 1 ಗಂಟೆ ಸುಮಾರಿಗೆ ತಮ್ಮಿಬ್ಬರು ಮಕ್ಕಳೊಂದಿಗೆ ತೆರಳಿ ಕೃಷಿ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.