newsics.com| ನ್ಯೂಸಿಕ್ಸ್
ನ್ಯೂಜೆರ್ಸಿ: ನಗರದ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಅರ್ಜೆಂಟೀನಾ ವಿರುದ್ಧ ಸ್ಪೇನ್ ಭರ್ಜರಿ ಗೆಲುವು ಸಾಧಿಸಿದೆ.
ಹೆಚ್ಚುವರಿ ಸಮಯದ ದ್ವಿತೀಯಾರ್ಧದಲ್ಲಿ ಫೆರಾನ್ ಟೊರೆಸ್ ರಿಬೌಂಡ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು.
ಇದರೊಂದಿಗೆ ಸ್ಪೇನ್ 1-0ರಿಂದ ಲಯೊನೆಲ್ ಮೆಸ್ಸಿ ಪಡೆಯನ್ನು ಸೋಲಿಸಿತು. ಅಲ್ಲದೆ, ಯುರೋಪಿಯನ್ ಚಾಂಪಿಯನ್ ಆಗಿರುವ ಸ್ಪೇನ್ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಅರ್ಜೆಂಟೀನಾದ ಎಂಜೊ ಫರ್ನಾಂಡೆಜ್ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದಾಗ ಮೆಸ್ಸಿ ಪಡೆ 10 ಆಟಗಾರರಿಗೆ ಸೀಮಿತವಾಗಿತ್ತು. ಅಲ್ಲದೆ, ಸ್ಪೇನ್ ಎದುರು ಆಕ್ರಮಣಕಾರಿಯಾಗಿ ಆಡುವಲ್ಲಿ ಸಂಪೂರ್ಣ ಎಡವಿತು.
65ನೇ ವಯಸ್ಸಿನಲ್ಲಿ ಸ್ಪೇನ್ ತಂಡದ ಲೂಯಿಸ್ ದೆಲಾ ಫ್ಯುಯಂತ್ ವಿಶ್ವಕಪ್ ಗೆದ್ದ ಅತ್ಯಂತ ಹಿರಿಯ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೆಸ್ಸಿ ಮೂರು ವಿಶ್ವಕಪ್ ಫೈನಲ್‌ಗಳಲ್ಲಿ ಆಡಿದ ವಿಶ್ವದ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಜೊತೆಗೆ ಫೈನಲ್ ಪಂದ್ಯವೊಂದರಲ್ಲಿ ಆಡಿದ ಅತ್ಯಂತ ಹಿರಿಯ ಔಟ್‌ಫೀಲ್ಡ್ ಆಟಗಾರ ಎನಿಸಿಕೊಂಡರು.
ಇಂಗ್ಲೆಂಡ್‌ಗೆ ಕಂಚು
ಇಂಗ್ಲೆಂಡ್ ಫುಟ್‌ಬಾಲ್ ತಂಡವು ಆರು ದಶಕಗಳ ನಂತರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪದಕ ಗೆಲುವಿನ ಸಂಭ್ರಮ ಆಚರಿಸಿಕೊಂಡಿತು. ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಶನಿವಾರ ತಡರಾತ್ರಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಬುಕಾಯೊ ಸಕಾ ‘ಹ್ಯಾಟ್ರಿಕ್’ ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡವು 6-4ರಿಂದ ಫ್ರಾನ್ಸ್ ಎದುರು ಜಯಭೇರಿ ಬಾರಿಸಿತು. ಎರಡು ಗೋಲು ಗಳಿಸಿದ ಫ್ರಾನ್ಸ್ ತಾರೆ ಕೈಲಿಯನ್ ಎಂಬಾಪೆ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾದರು.
ಒಟ್ಟು 22 ಗೋಲು ಹೊಡೆದಿರುವ ಅವರು ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ (21) ಅವರನ್ನು ಹಿಂದಿಕ್ಕಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಅವರು 10 ಗೋಲುಗಳೊಂದಿಗೆ ‘ಚಿನ್ನದ ಬೂಟು’ ಪಡೆಯುವವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇಂಗ್ಲೆಂಡ್ ತಂಡವು 1966ರಲ್ಲಿ ಚಾಂಪಿಯನ್ ಆಗಿತ್ತು. ಅದರ ನಂತರ ಇದೇ ಮೊದಲ ಬಾರಿಗೆ ಪದಕ ಸಾಧನೆ ಮಾಡಿತು. ಸೆಮಿಫೈನಲ್‌ನಲ್ಲಿ ತಂಡವು ಅರ್ಜೆಂಟೀನಾ ಎದುರು ಸೋತಿತ್ತು.
Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್
KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ