newsics.com | ನ್ಯೂಸಿಕ್ಸ್
ಬೆಳ್ತಂಗಡಿ: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಪೊಲೀಸ್ ಠಾಣೆಯ ‘ಬುರುಡೆ ಷಡ್ಯಂತ್ರ’ ಪ್ರಕರಣದ (ಮೊಕದ್ದಮೆ ಸಂಖ್ಯೆ: 39/2025) ಸುದೀರ್ಘ ತನಿಖೆಯನ್ನು ಪೂರ್ಣಗೊಳಿಸಿರುವ ವಿಶೇಷ ತನಿಖಾ ದಳವು (SIT), ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಬರೋಬ್ಬರಿ 7,005 ಪುಟಗಳ ಬೃಹತ್ ಅಂತಿಮ ತನಿಖಾ ವರದಿಯನ್ನು ಹಸ್ತಾಂತರಿಸಿದೆ.
ಪ್ರಕರಣದ ಸತ್ಯಾಸತ್ಯತೆಯನ್ನು ಹೊರಗೆಳೆಯಲು ಹಗಲಿರುಳು ಶ್ರಮಿಸಿದ ಎಸ್‌ಐಟಿ ಅಧಿಕಾರಿಗಳ ತಂಡವು, ಇಂದು ಮಧ್ಯಾಹ್ನ ನಿಖರವಾಗಿ 3 ಗಂಟೆಗೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಶಾಂಕ್ ನಾಗೇಂದ್ರ ಭಟ್ ಅವರ ಮುಂದೆ ಹಾಜರಾಗಿ ಒಟ್ಟು 12 ಬೃಹತ್ ಕಡತಗಳಲ್ಲಡಗಿರುವ ಸಮಗ್ರ ಚಾರ್ಜ್ ಶೀಟ್ ಅನ್ನು ಅಧಿಕೃತವಾಗಿ ಸಲ್ಲಿಕೆ ಮಾಡಿದೆ.
ಈ ಹಿಂದೆ ಎಸ್‌ಐಟಿ ಸಲ್ಲಿಸಿದ್ದ 3,923 ಪುಟಗಳ ಪ್ರಾಥಮಿಕ ವರದಿ ಹಾಗೂ ಪ್ರಸ್ತುತ ಸಿದ್ಧಪಡಿಸಲಾದ ಹೆಚ್ಚುವರಿ 3,082 ಪುಟಗಳ ತನಿಖಾ ವರದಿಯನ್ನು ಕ್ರೋಢೀಕರಿಸಿ ಈ ಬೃಹತ್ ಅಂತಿಮ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಕಳೆದ ವರ್ಷದ ನವೆಂಬರ್ 20 ರಂದು ಸುಳ್ಳು ಸಾಕ್ಷ್ಯ ನುಡಿದ (Perjury) ಆರೋಪದ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 215 ರ ಅನ್ವಯ ಎಸ್‌ಐಟಿ ನ್ಯಾಯಾಲಯಕ್ಕೆ ಮಹತ್ವದ ವರದಿಯನ್ನು ಒಪ್ಪಿಸಿತ್ತು. ಆ ಸುಳ್ಳು ಸಾಕ್ಷ್ಯ ಮತ್ತು ಹುನ್ನಾರದ ಹಿಂದಿದ್ದ ವ್ಯವಸ್ಥಿತ ಪ್ಲಾನ್ ಬಗ್ಗೆ ಈಗ ಎಸ್‌ಐಟಿ ಎಳೆಎಳೆಯಾಗಿ ನ್ಯಾಯಾಲಯಕ್ಕೆ ವಿವರಣೆ ನೀಡಿದೆ.
ಈ ಹಗರಣ ಹಾಗೂ ಸುಳ್ಳು ಹರಡುವಿಕೆಯ ಪ್ರಕರಣದಲ್ಲಿ ಒಟ್ಟು ಆರು ಪ್ರಮುಖ ವ್ಯಕ್ತಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದ್ದು, ಅವರ ಪಟ್ಟಿ ಇಂತಿದೆ:
- ಸಿ.ಎನ್. ಚಿನ್ನಯ್ಯ (ಮಾಜಿ ಮಾಸ್ಕ್ ಮ್ಯಾನ್ ಹಾಗೂ ಮುಖ್ಯ ಆರೋಪಿ)
- ಮಹೇಶ್ ಶೆಟ್ಟಿ ತಿಮರೋಡಿ
- ಗಿರೀಶ್ ಮಟ್ಟಣ್ಣವರ್
- ಜಯಂತ್ ಟಿ.
- ವಿಠಲ್ ಗೌಡ
- ಸುಜಾತಾ ಭಟ್
ನ್ಯಾಯಾಲಯದಲ್ಲಿ ಗಣ್ಯ ಅಧಿಕಾರಿಗಳು ಹಾಗೂ ಆರೋಪಿ ಹಾಜರು
ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗುವ ಸಂದರ್ಭದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ದಂಡೇ ನೆರೆದಿತ್ತು:
- ಎಸ್‌ಐಟಿ ಪೊಲೀಸ್ ವರಿಷ್ಠಾಧಿಕಾರಿ (SP) ಸಿ.ಎ. ಸೈಮನ್
- ಇನ್ಸ್‌ಪೆಕ್ಟರ್‌ಗಳಾದ ಕುಸುಮಾಧರ್, ಮಂಜುನಾಥ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
- ಇವರೊಂದಿಗೆ ಪ್ರಕರಣದ ಮೊದಲನೇ ಆರೋಪಿಯಾಗಿರುವ ಮಾಜಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಕೂಡ ಬಿಗಿ ಭದ್ರತೆಯಲ್ಲಿ ಕೋರ್ಟ್ ಕಲಾಪಕ್ಕೆ ಹಾಜರುಪಡಿಸಲಾಗಿತ್ತು.
ಹಿನ್ನೆಲೆ: 2025ರ ಆಗಸ್ಟ್ 23 ರಂದು ಸುಳ್ಳು ಪುರಾವೆಗಳನ್ನು ಸೃಷ್ಟಿಸಿ, ದಾರಿ ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಮುಖ್ಯ ಆರೋಪಿ ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಅಲ್ಲಿಂದ ಆರಂಭವಾದ ಈ ತನಿಖಾ ಪ್ರಕ್ರಿಯೆ ಇದೀಗ ಅಂತಿಮ ಚಾರ್ಜ್ ಶೀಟ್ ಸಲ್ಲಿಕೆಯೊಂದಿಗೆ ಕಾನೂನು ಸಮರದ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ.
Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ ಬಚಾವ್ ಮಾಡಿದ ತಾಯಿ!