newsics.com | ನ್ಯೂಸಿಕ್ಸ್
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಆರಂಭಿಸಿದೆ. ಈ ಬಾರಿಯ ದಸರಾ ಮಹೋತ್ಸವದ ಪೂರ್ವ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ರಾಜಧಾನಿಯಲ್ಲಿ ಮಹತ್ವದ ಸಭೆ ನಡೆಯಿತು.
ಹೌದು, ಈ ಮಹತ್ವದ ಸಭೆಯಲ್ಲಿ ನವರಾತ್ರಿ ಸಂಭ್ರಮದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ದಿನಾಂಕ ಮತ್ತು ಮುಹೂರ್ತವನ್ನು ಅಧಿಕೃತವಾಗಿ ಅಂತಿಮಗೊಳಿಸಲಾಗಿದೆ.
ಈ ಬಾರಿಯ ನವರಾತ್ರಿ ಉತ್ಸವಕ್ಕೆ ಅಕ್ಟೋಬರ್ 11 ರಂದು ಅಧಿಕೃತ ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 11:50 ಕ್ಕೆ ಮೈಸೂರಿನ ಪವಿತ್ರ ಚಾಮುಂಡಿ ಬೆಟ್ಟದಲ್ಲಿ, ಶುಭ ಧನುರ್ ಲಗ್ನದಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಆನೆಗಳ ‘ಗಜ ಪಯಣ’ ಮತ್ತು ಗಜ ಪಡೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಆಗಸ್ಟ್ 26 ರಂದು ಮುಹೂರ್ತ ನಿಗದಿಪಡಿಸಲಾಗಿದೆ. ಅಂದಿನಿಂದಲೇ ದಸರಾ ಆನೆಗಳು ಮೈಸೂರಿನತ್ತ ಮುಖ ಮಾಡಲಿವೆ.
ಇನ್ನು, ವಿಶ್ವದ ಗಮನ ಸೆಳೆಯುವ ವಿಜಯದಶಮಿ ಮೆರವಣಿಗೆ ಮತ್ತು ಜಂಬೂ ಸವಾರಿಯು ಅಕ್ಟೋಬರ್ 21 ರಂದು ಜರುಗಲಿದೆ. ಅಂದು ಮಧ್ಯಾಹ್ನ 1:36 ಕ್ಕೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಕೆಯಾಗಲಿದೆ. ತದನಂತರ ಶುಭ ಮೀನ ಲಗ್ನದಲ್ಲಿ, ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿಗೆ ಸಾಂಪ್ರದಾಯಿಕವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ಮೆರವಣಿಗೆಗೆ ಗ್ರೀನ್ ಸಿಗ್ನಲ್ ಸಿಗಲಿದೆ.
ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜರುಗಲಿರುವ ಮೊದಲ ದಸರಾ ಮಹೋತ್ಸವ ಇದಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಹಬ್ಬವನ್ನು ಎಂದಿಗಿಂತಲೂ ಹೆಚ್ಚು ಸಡಗರ, ಸಂಭ್ರಮ ಹಾಗೂ ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ನಾಡಹಬ್ಬದ ಯಶಸ್ಸಿಗೆ ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ತಿಂಗಳಿಗೆ ₹9,250 ಗಳಿಸುವ ಸುವರ್ಣಾವಕಾಶ https://www.newsics.com/2026/07/10/post-office-mis-scheme-details/