newsics.com | ನ್ಯೂಸಿಕ್ಸ್
ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ಹುಂಡಿ ಹಣಕ್ಕೆ ಕನ್ನ ಹಾಕಿದ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಮಂದಿರದ ಕಾಣಿಕೆ ಹಣವನ್ನು ದೋಚಿ ಸಿಕ್ಕಿಬಿದ್ದಿರುವ ಎಂಟು ಮಂದಿ ಬ್ಯಾಂಕ್ ಸಿಬ್ಬಂದಿ ಪೈಕಿ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ, ತಾನು ಕದ್ದ ಹಣವನ್ನು ಎಲ್ಲೆಲ್ಲಿಗೆ ಇನ್ವೆಸ್ಟ್ ಮಾಡಿದ್ದಾನೆ ಎಂಬ ಕಟು ಸತ್ಯವನ್ನು ಪೊಲೀಸ್ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಭಕ್ತರು ಶ್ರದ್ಧೆಯಿಂದ ಸಮರ್ಪಿಸಿದ ಹಣದಲ್ಲಿ ಈತ ತನ್ನ ಪ್ರೇಯಸಿಗೆ ದುಬಾರಿ ಐಫೋನ್ ಕೊಡಿಸಿ, ಮೋಜು-ಮಸ್ತಿ ಮಾಡಿರುವುದು ಪತ್ತೆಯಾಗಿದೆ.
ಒಬ್ಬನೇ ದೋಚಿದ್ದ 20 ಲಕ್ಷ ರೂಪಾಯಿ
ಮಂದಿರದ ದೇಣಿಗೆ ಹಣ ಎಣಿಸುವ ಸಿಬ್ಬಂದಿಯೇ ಈ ಕಳ್ಳತನದ ಜಾಲದಲ್ಲಿದ್ದರು. ಆ ಪೈಕಿ ಅವಿನಾಶ್ ಶುಕ್ಲಾ ಒಬ್ಬನೇ ಅತಿ ಹೆಚ್ಚು ಅಂದರೆ ಸರಿಸುಮಾರು 20 ಲಕ್ಷ ರೂಪಾಯಿ ಹಣವನ್ನು ಮಂದಿರದ ಆವರಣದಿಂದ ಯಾರಿಗೂ ತಿಳಿಯದಂತೆ ಸಾಗಿಸಿದ್ದನು. ಇದರಲ್ಲಿ 19 ಲಕ್ಷ ರೂಪಾಯಿಯನ್ನು ಕೇವಲ ತನ್ನ ವೈಯಕ್ತಿಕ ಐಷಾರಾಮಿ ಜೀವನ ಹಾಗೂ ಕುಟುಂಬದ ಸುಖಭೋಗಗಳಿಗಾಗಿ ಇಷ್ಟಬಂದಂತೆ ಖರ್ಚು ಮಾಡಿ ಮುಗಿಸಿದ್ದಾನೆ.
ಪೊಲೀಸರು ನಡೆಸಿದ ತೀವ್ರ ವಿಚಾರಣೆಯಲ್ಲಿ ಆರೋಪಿ ಅವಿನಾಶ್ ಕದ್ದ ಹಣ ಖರ್ಚು ಮಾಡಿದನ್ನು ಬಿಚ್ಚಿಟ್ಟಿದ್ದಾನೆ.
ತನ್ನ ಗರ್ಲ್ಫ್ರೆಂಡ್ಗೆ ಅತ್ಯಂತ ದುಬಾರಿ ಮುಖಬೆಲೆಯ ಐಫೋನ್ (iPhone) ಗಿಫ್ಟ್ ನೀಡಿದ್ದಲ್ಲದೆ, ಆಕೆಯ ಬ್ಯಾಂಕ್ ಅಕೌಂಟ್ಗೆ ಬರೋಬ್ಬರಿ 2.5 ಲಕ್ಷ ರೂಪಾಯಿ ಹಣವನ್ನು ಟ್ರಾನ್ಸ್ಫರ್ ಮಾಡಿದ್ದಾನೆ. ಇನ್ನು ಕದ್ದ ತಕ್ಷಣವೇ ತನ್ನ ಸಹೋದರನ ಮದುವೆ ಕಾರ್ಯಕ್ರಮಕ್ಕಾಗಿ ಸುಮಾರು 6 ಲಕ್ಷ ರೂಪಾಯಿ ಹಣವನ್ನು ಅನಾವಶ್ಯಕವಾಗಿ ಖರ್ಚುಮಾಡಿದ್ದಾನೆ. ಉಳಿದ ಹಣದಲ್ಲಿ ಮತ್ತೊಬ್ಬ ಸಹೋದರನಿಗೆ ಬರೋಬ್ಬರಿ 5 ರಿಂದ 6 ಲಕ್ಷ ರೂಪಾಯಿ ಕ್ಯಾಶ್ ನೀಡಿದ್ದಾನೆ.
ಸದ್ಯ ಪೊಲೀಸರು ಈ ಇಡೀ ಗ್ಯಾಂಗ್ನ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು, ಅವರ ಆರ್ಥಿಕ ವಹಿವಾಟುಗಳ ಮೇಲೆ ಕಣ್ಣಿಟ್ಟಿದ್ದಾರೆ. ಆರೋಪಿಗಳು ಕಳ್ಳತನದ ಹಣದಿಂದ ಇತ್ತೀಚೆಗೆ ಮಾಡಿರುವ ಆಸ್ತಿಪಾಸ್ತಿಗಳ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ. ಕೋರ್ಟ್ಗೆ ಬಲಿಷ್ಠವಾದ ದೋಷಾರೋಪಣೆ ಪಟ್ಟಿಯನ್ನು (Charge Sheet) ಸಲ್ಲಿಸಲು ಮತ್ತು ಹಣದ ವರ್ಗಾವಣೆಯ ನಿಖರ ಪುರಾವೆಗಳನ್ನು ಕಲೆಹಾಕಲು ತನಿಖಾ ತಂಡ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದೆ. ಭಕ್ತರ ನಂಬಿಕೆಗೆ ದ್ರೋಹ ಬಗೆದ ಈ ಸಿಬ್ಬಂದಿಯ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Crime Case ತಹಶೀಲ್ದಾರ್ ನಿವಾಸದಲ್ಲೇ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್