newsics.com | ನ್ಯೂಸಿಕ್ಸ್
ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವರ್ತುಲ ರಸ್ತೆ (Outer Ring Road) ಭಾಗದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಮುಕ್ತಿ ನೀಡಲು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಖುದ್ದು ಅಖಾಡಕ್ಕಿಳಿದಿದ್ದಾರೆ. ಗುರುವಾರ ತಡರಾತ್ರಿ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ನಡೆಸಿದ ಸಚಿವರು, ರಸ್ತೆ ಗುಂಡಿ, ಧೂಳಿನ ಸಮಸ್ಯೆ ಮತ್ತು ಫುಟ್‌ಪಾತ್ ಒತ್ತುವರಿ ಪರಿಶೀಲನೆ ನಡೆಸಿದರು. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗಿನ ರಸ್ತೆಗಳ ದುಸ್ಥಿತಿಯನ್ನು ವೀಕ್ಷಿಸಿದ ಅವರು, ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
400 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ರಸ್ತೆ ನಿರ್ಮಾಣ
ಹೊರವರ್ತುಲ ರಸ್ತೆಯ ಸಮಸ್ಯೆಯನ್ನು ಸರಿಪಡಿಸಲು ಬಿ-ಸ್ಮೈಲ್ ಸಂಸ್ಥೆಯ ವತಿಯಿಂದ ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿವರೆಗಿನ 17.1 ಕಿಲೋಮೀಟರ್ ಉದ್ದದ ರಸ್ತೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು 400 ಕೋಟಿ ರೂಪಾಯಿಗಳ ಬೃಹತ್ ಅನುದಾನ ನೀಡಿದ್ದಾರೆ. ಈ ಕಾಮಗಾರಿಯ ಹಿನ್ನೆಲೆಯಲ್ಲಿ ಲೌರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ರಿಯಾಲಿಟಿ ಚೆಕ್ ನಡೆಸಿದ ಸಚಿವರು, ಅಪಾಯಕಾರಿಯಾಗಿ ನೇತಾಡುತ್ತಿದ್ದ ಬೆಸ್ಕಾಂ ವಯರ್‌ಗಳು ಹಾಗೂ ಕಿತ್ತುಹೋಗಿದ್ದ ಸರ್ವೀಸ್ ರಸ್ತೆಗಳನ್ನು ಕಂಡು ಗರಂ ಆದರು. ಯಾವುದೇ ರಾಜಿ ಮಾಡಿಕೊಳ್ಳದೆ ಏಕರೂಪದ ವಿನ್ಯಾಸದೊಂದಿಗೆ ರಸ್ತೆ ಕಾಮಗಾರಿ ಮುಗಿಸುವಂತೆ ಡೆಡ್‌ಲೈನ್ ನೀಡಿದರು.
ಹೊಸ ರಸ್ತೆ ಅಗೆದಿದ್ದಕ್ಕೆ ಸಚಿವರ ಕೆಂಡಾಮಂಡಲ!
ಪರಿಶೀಲನೆ ವೇಳೆ ದೊಡ್ಡಾನೆಕ್ಕುಂದಿ ಜಂಕ್ಷನ್‌ನಲ್ಲಿ ಇತ್ತೀಚೆಗಷ್ಟೇ ಡಾಂಬರೀಕರಣ ಮಾಡಲಾಗಿದ್ದ ಹೊಸ ರಸ್ತೆಯನ್ನು ಮತ್ತೆ ಅಗೆದಿರುವುದು ಸಚಿವರ ಗಮನಕ್ಕೆ ಬಂದಿತು. ಇದನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೃಷ್ಣಭೈರೇಗೌಡರು, “ರಾತ್ರೋರಾತ್ರಿ ಹೊಸ ರಸ್ತೆಯನ್ನು ಅಗೆದವರು ಯಾರು?” ಎಂದು ಸ್ಥಳದಲ್ಲಿದ್ದ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಇಲಾಖೆಗಳ ನಡುವಿನ ಸಮನ್ವಯ ಕೊರತೆಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿದರು.
‘ಫುಟ್‌ಪಾತ್ ಒತ್ತುವರಿಯಿಂದ ವರ್ಷಕ್ಕೆ 300 ಸಾವು’: ಸಚಿವರ ಗಂಭೀರ ಎಚ್ಚರಿಕೆ
ಇದೇ ವೇಳೆ ನಗರದಲ್ಲಿ ಸದ್ಯ ತೀವ್ರ ಚರ್ಚೆಯಲ್ಲಿರುವ ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ಸಚಿವರು ಕಟ್ಟುನಿಟ್ಟಾಗಿ ಸಮರ್ಥಿಸಿಕೊಂಡರು.”ನಾವು ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿಲ್ಲ, ವ್ಯಾಪಾರ ಮಾಡಬೇಡಿ ಎನ್ನುತ್ತಿಲ್ಲ. ಆದರೆ ಮುಖ್ಯ ರಸ್ತೆಗಳ ಫುಟ್‌ಪಾತ್ ಒತ್ತುವರಿ ಮಾಡಬೇಡಿ” ಎಂದು ಕಡಕ್ ಆಗಿ ಹೇಳಿದರು. ಪಾದಚಾರಿ ಮಾರ್ಗಗಳು ಬಂದ್ ಆಗಿರುವುದರಿಂದ ಸಾರ್ವಜನಿಕರು ಅನಿವಾರ್ಯವಾಗಿ ರಸ್ತೆಯ ಮೇಲೆಯೇ ನಡೆಯಬೇಕಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪ್ರತಿವರ್ಷ 300ಕ್ಕೂ ಹೆಚ್ಚು ಅಮಾಯಕರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. “ನಿಮ್ಮ ಕುಟುಂಬದವರಿಗೆ ಈ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ?” ಎಂದು ಪ್ರಶ್ನಿಸಿದ ಸಚಿವರು, ಮುಖ್ಯ ರಸ್ತೆಗಳನ್ನು ಬಿಟ್ಟು ಪಕ್ಕದ ಗಲ್ಲಿ ರಸ್ತೆಗಳಲ್ಲಿ ವ್ಯಾಪಾರ ಮಾಡಿಕೊಂಡರೆ ಸರ್ಕಾರದ ಕಡೆಯಿಂದ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟನೆ ನೀಡಿದರು.