newsics.com | ನ್ಯೂಸಿಕ್ಸ್
ಎರ್ನಾಕುಲಂ: ಸಮಯಕ್ಕೆ ಸರಿಯಾಗಿ ಸಿಕ್ಕ ಪ್ರಥಮ ಚಿಕಿತ್ಸೆ ಮತ್ತು ಇಬ್ಬರು ನರ್ಸ್‌ಗಳ ಅದ್ಭುತ ಸಮಯಪ್ರಜ್ಞೆಯಿಂದಾಗಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದ 43 ವರ್ಷದ ವ್ಯಕ್ತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ರೋಮಾಂಚನಕಾರಿ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕಾಲಡಿ ಸೇತುವೆ ಬಳಿ ನಡೆದಿದೆ.
ತನ್ನ ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಒಕ್ಕಲ್ ನಿವಾಸಿ ಶಿನೋಜ್ (ಲಾಟರಿ ಅಂಗಡಿ ಮಾಲೀಕ) ಅವರಿಗೆ ಎಂ.ಸಿ ರಸ್ತೆಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ (KSRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಕೃತಿ ಚಿಕಿತ್ಸಾಲಯದ ನರ್ಸ್ ಅಂಜಲಿ ಬೈಜು ಹಾಗೂ ಬೆಂಗಳೂರಿನಲ್ಲಿ ನರ್ಸಿಂಗ್ ಕಲಿಯುತ್ತಿರುವ ವಿದ್ಯಾರ್ಥಿನಿ ಆರ್ದ್ರಾ ರಾಜ್ ರಸ್ತೆಯಲ್ಲಾಗುತ್ತಿದ್ದ ಗದ್ದಲವನ್ನು ಗಮನಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಇಬ್ಬರು ಯುವತಿಯರು ತಕ್ಷಣವೇ ಚಲಿಸುತ್ತಿದ್ದ ಬಸ್‌ನಿಂದ ಕೆಳಗಿಳಿದು ಕಾರಿನ ಬಳಿ ಧಾವಿಸಿದ್ದಾರೆ. ತಡಮಾಡದೇ ಪ್ರಜ್ಞೆ ತಪ್ಪಿದ್ದ ಶಿನೋಜ್ ಅವರಿಗೆ ಕಾರಿನ ಒಳಗಡೆಯೇ ಸಿಪಿಆರ್ (Cardiopulmonary Resuscitation – CPR) ನೀಡಲು ಆರಂಭಿಸಿದ್ದಾರೆ. ಆಸ್ಪತ್ರೆಗೆ ತಲುಪುವವರೆಗೂ ಸತತವಾಗಿ ಸಿಪಿಆರ್ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ.
ಈ ರಕ್ಷಣಾ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಭಾರಿ ಬೆಂಬಲ ನೀಡಿದ್ದಾರೆ. ಶಿನೋಜ್ ಅವರ ಪರಿಸ್ಥಿತಿಯನ್ನು ಕಂಡು ದಾರಿಹೋಕರೊಬ್ಬರು ತಕ್ಷಣ ಕಾರಿನ ಸ್ಟೀರಿಂಗ್ ಹಿಡಿದು ಆಸ್ಪತ್ರೆಯತ್ತ ಮುನ್ನುಗ್ಗಿದರೆ, ಉಳಿದ ಸಾರ್ವಜನಿಕರು ಟ್ರಾಫಿಕ್ ನಡುವೆಯೇ ಕಾರು ಸುಲಭವಾಗಿ ಚಲಿಸಲು ದಾರಿ ಮಾಡಿಕೊಟ್ಟಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಶಿನೋಜ್ ಚೇತರಿಸಿಕೊಳ್ಳುವ ಲಕ್ಷಣಗಳನ್ನು ತೋರಿಸಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಸ್ತುತ ಶಿನೋಜ್ ಅವರಿಗೆ ತುರ್ತು ಆಂಜಿಯೋಪ್ಲಾಸ್ಟಿ (Emergency Angioplasty) ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಠಿಣ ಸಮಯದಲ್ಲಿ ಧೈರ್ಯ ತೋರಿಸಿ ಜೀವ ಉಳಿಸಿದ ಇಬ್ಬರು ನರ್ಸ್‌ಗಳು ಹಾಗೂ ಸ್ಥಳೀಯರ ಮಾನವೀಯತೆಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು