newsics.com | ನ್ಯೂಸಿಕ್ಸ್
ಕಾಸರಗೋಡು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಕಾಸರಗೋಡಿನ ಯೂಟ್ಯೂಬರ್ ಧನ್ಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ ಬೆನ್ನಲ್ಲೇ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದ ಪ್ರಭಾವಿ (ಇನ್‌ಫ್ಲುಯೆನ್ಸರ್) ‘ಹೆಲೆನ್ ಆಫ್ ಸ್ಪಾರ್ಟಾ’ (Helen of Sparta) ಖ್ಯಾತಿಯ ಧನ್ಯ ಎಸ್.ಆರ್. ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, “ಎಲ್ಲರೂ ಸೇರಿ ನನ್ನ ತಂದೆ-ತಾಯಿಗೆ ತೊಂದರೆ ಕೊಡುತ್ತಿದ್ದಾರೆ. ನಾನೇನು ಜೈಲಿನಲ್ಲಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.
ಡಿವೈಎಸ್‌ಪಿ ಕಚೇರಿಗೆ ತಲುಪಿದ ಅವಧಿಯಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.

“ದೇವರೆ… ಎಲ್ಲರೂ ಸೇರಿ ನನ್ನ ಅಪ್ಪ-ಅಮ್ಮನಿಗೆ ಫೋನ್ ಮಾಡಿ ಕಾಟ ಕೊಡುತ್ತಿದ್ದಾರೆ. ಹೆಲೆನ್ ಆಫ್ ಸ್ಪಾರ್ಟಾ ಪೊಲೀಸ್ ಸ್ಟೇಷನ್‌ನಲ್ಲಿದ್ದಾಳೆ, ಜೈಲು ಪಾಲಾಗಿದ್ದಾಳೆ, ಅವಳಿಗೆ ಗಲ್ಲು ಶಿಕ್ಷೆಯಾಗಿದೆ ಎಂದೆಲ್ಲಾ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಆರಾಮಾಗಿದ್ದೇನೆ. ಕೆಲಸದ ನಿಮಿತ್ತ ಡಿವೈಎಸ್‌ಪಿ ಕಚೇರಿಯಲ್ಲಿದ್ದೇನೆ. ಇದರ ನಂತರ ಸಂಪೂರ್ಣ ವಿವರಗಳೊಂದಿಗೆ ಮತ್ತೊಂದು ವಿಡಿಯೋ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಜು.1ರಂದು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದ ಹಿನ್ನೆಲೆಯಲ್ಲಿ ಕಾಸರಗೋಡಿನ ಕುಂಬಳೆ ಪೊಲೀಸರು ಧನ್ಯ ವಿರುದ್ಧ ಕೇಸ್ ದಾಖಲಿಸಿದ್ದರು.
ತಡರಾತ್ರಿ ಎರಡು ಗಂಟೆ ವೇಳೆಗೆ ಕಾಸರಗೋಡಿನ ಅಣಂಗೂರಿನಲ್ಲಿ ಪೊಲೀಸರು ತಡೆದರೂ ನಿಲ್ಲಿಸದೆ ಕಾರು ಚಲಾಯಿಸಿಕೊಂಡು ಹೋದ ಧನ್ಯ ಅವರ ಕಾರನ್ನು ಬೆನ್ನತ್ತಿ ಕುಂಬಳೆ ಬಂದೊಡು ಭಗವತಿ ನಗರದಲ್ಲಿ ವಶಕ್ಕೆ ಪಡೆದಿದ್ದರು.
ತಪಾಸಣೆಯ ವೇಳೆ ಧನ್ಯ ಮದ್ಯಪಾನ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಲ್ಲದೆ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.
ಧನ್ಯ ಅವರು ಕಾಸರಗೋಡಿನ ಪೆರುಂಬಳ ನಿವಾಸಿ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರು ಧನ್ಯ ಅವರಿಗೆ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.
Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು