newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯಾದ್ಯಂತ ವರುಣನ ಆರ್ಭಟ ತೀವ್ರಗೊಂಡಿದ್ದು, ಕರಾವಳಿ ಮತ್ತು ಮಲೆನಾಡಿನ ಬಹುತೇಕ ಭಾಗಗಳಲ್ಲಿ ಮುರಿಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನ ವೈಪರೀತ್ಯ ಹಾಗೂ ಪ್ರವಾಹದ ಮುನ್ನೆಚ್ಚರಿಕೆಯಾಗಿ ಭಾರತೀಯ ಹವಾಮಾನ ಇಲಾಖೆ (IMD) ಜಿಲ್ಲಾವಾರು ಅಲರ್ಟ್‌ಗಳನ್ನು ಜಾರಿಗೊಳಿಸಿದೆ.
ಕರಾವಳಿಗೆ ರೆಡ್ ಅಲರ್ಟ್: ಜುಲೈ 5 ರಿಂದ 7 ರವರೆಗೆ ಎಚ್ಚರಿಕೆ!
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಜುಲೈ 3 ಮತ್ತು 4 ರಂದು ಭಾರಿ ಮಳೆಯಾಗಲಿದ್ದು, ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಆದರೆ, ಜುಲೈ 5 ರಿಂದ 7 ರ ಅವಧಿಯಲ್ಲಿ ಮಳೆಯ ತೀವ್ರತೆ ಮಿತಿಮೀರಲಿದ್ದು, ಈ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ.
ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಳ್ಳುವ ಹಾಗೂ ಘಾಟ್ ವಿಭಾಗಗಳಲ್ಲಿ ಭೂಕುಸಿತ (Landslides) ಸಂಭವಿಸುವ ಗಂಭೀರ ಆತಂಕ ಎದುರಾಗಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಅನಗತ್ಯವಾಗಿ ದೂರದ ಪ್ರಯಾಣ ಮಾಡದಂತೆ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಸೂಚನೆ ನೀಡಿವೆ.
ಬೆಂಗಳೂರು ಸೇರಿದಂತೆ ಒಳನಾಡಿಗೆ ಯೆಲ್ಲೋ ಅಲರ್ಟ್
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಿಗೆ ಜುಲೈ ಮೊದಲ ವಾರದಲ್ಲಿ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಮೈಸೂರು, ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ಜಿಲ್ಲೆಗಳಲ್ಲಿ ದಿನಕ್ಕೆ 64.5 mm ನಿಂದ 115.4 mm ವರೆಗೆ ಮಳೆ ದಾಖಲಾಗಬಹುದು. ಇದರೊಂದಿಗೆ ಸಿಡಿಲು ಬಡಿಯುವ ಸಾಧ್ಯತೆ ಇದ್ದು, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ.
ವಾಹನ ಸವಾರರೇ ಗಮನಿಸಿ!
ಬೆಂಗಳೂರು ಒಳಗೊಂಡಂತೆ ಒಳನಾಡಿನ ಜಿಲ್ಲೆಗಳಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲದಿದ್ದರೂ, ಸದಾ ಮೋಡ ಕವಿದ ವಾತಾವರಣ ಇರಲಿದೆ. ನಿರಂತರ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವ ಹಾಗೂ ಬಿರುಗಾಳಿಗೆ ಮರಗಳು ಧರೆಗುರುಳುವ ಸಂಭವ ಇರುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಲು ಹವಾಮಾನ ಇಲಾಖೆ ಸಲಹೆ ನೀಡಿದೆ.
Krishna Byregowda ತಡರಾತ್ರಿ ರಸ್ತೆಗಿಳಿದ ಸಚಿವ ಕೃಷ್ಣಭೈರೇಗೌಡ: ಹೊಸ ರಸ್ತೆ ಅಗೆದ ಇಂಜಿನಿಯರ್‌ಗಳಿಗೆ ಕಡಕ್ ಕ್ಲಾಸ್!