newsics.com / ನ್ಯೂಸಿಕ್ಸ್
ಭಾರತೀಯ ಚಿತ್ರರಂಗದ ಅದ್ಬುತ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್ ಅವರು ಸದ್ಯ ತೀವ್ರವಾದ ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ.
ಇತ್ತೀಚೆಗೆ ತಮ್ಮ ಅನಾರೋಗ್ಯದ ಕುರಿತು ಸ್ವತಃ ಸೋನು ನಿಗಮ್ ಅವರೇ ವಿಡಿಯೋವೊಂದರ ಮೂಲಕ ಆತಂಕಕಾರಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ತಮಗೆ ತೀವ್ರವಾದ ನರಗಳ ಸಮಸ್ಯೆ ಎದುರಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಕಠಿಣ ಪರಿಸ್ಥಿತಿಯಲ್ಲೂ ತಾವು ಒಪ್ಪಿಕೊಂಡಿರುವ ಲೈವ್ ಶೋ ಅನ್ನ ರದ್ದುಗೊಳಿಸದೆ ನೋವನ್ನು ಸಹಿಸಿಕೊಂಡೇ ವೇದಿಕೆ ಏರಲು ಸಜ್ಜಾಗಿರುವುದು ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ.
ಸೋನು ನಿಗಮ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರ ದೇಹದ ನರಗಳು ಬ್ಲಾಕ್ ಆಗಿವೆ. ಕಳೆದ ಒಂದು ವಾರದಿಂದ ಅವರು ನಿರಂತರವಾಗಿ ಎಂಆರ್ಐ ಮತ್ತು ಸಿಟಿ ಸ್ಕ್ಯಾನ್ಗಳಂತಹ ವೈದ್ಯಕೀಯ ತಪಾಸಣೆಗಳಿಗೆ ಒಳಗಾಗುತ್ತಿದ್ದಾರೆ. ನೋವನ್ನ ನಿವಾರಿಸಲು ಮತ್ತು ನರಗಳ ಸಮಸ್ಯೆಯನ್ನ ಸರಿಪಡಿಸಲು ಹೈ-ಡೋಸ್ ಔಷಧಿಗಳನ್ನ ನೀಡಲಾಗುತ್ತಿದೆ. ಇದರೊಂದಿಗೆ ಅವರು ಅತ್ಯಂತ ನೋವಿನಿಂದ ಕೂಡಿರುವ ಫಿಸಿಯೋಥೆರಪಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಸದ್ಯಕ್ಕೆ ನೋವು ನಿವಾರಕ ಮಾತ್ರೆಗಳ ಸಹಾಯದಿಂದಲೇ ಅವರು ದಿನದೂಡುತ್ತಿದ್ದಾರೆ.
ನರಗಳನ್ನ ಸಡಿಲಗೊಳಿಸಲು ವೈದ್ಯರು ನೀಡಿರುವ ಪ್ರಬಲ ಔಷಧಿಗಳ ಪ್ರಭಾವ ಸೋನು ನಿಗಮ್ ಅವರ ಗಂಟಲಿನ ಮೇಲೂ ಬೀರಿದೆ. ಮಾತ್ರೆಗಳ ಕಾರಣದಿಂದಾಗಿ ತಮ್ಮ ಗಂಟಲು ಸ್ವಲ್ಪ ಭಾರವಾದಂತೆ ಅನಿಸುತ್ತಿದೆ ಹಾಗೂ ಧ್ವನಿಯಲ್ಲಿ ಏರುಪೇರಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಒಬ್ಬ ಗಾಯಕನಿಗೆ ಲೈವ್ ಕಾರ್ಯಕ್ರಮ ಇರುವಾಗ ಧ್ವನಿಯಲ್ಲಿ ಸಣ್ಣ ವ್ಯತ್ಯಾಸವಾದರೂ ಆತಂಕ ಉಂಟಾಗುತ್ತದೆ. ಆದರೆ, ಸೋನು ನಿಗಮ್ ಅವರು ಈ ಯಾವುದೇ ಸವಾಲುಗಳಿಗೆ ಧೃತಿಗೆಡದೆ ಮುನ್ನಡೆಯುತ್ತಿದ್ದಾರೆ.
ತುಂಬಾ ದಿನಗಳ ನಂತರ ಮುಂಬೈನಲ್ಲಿ ಬೃಹತ್ ಲೈವ್ ಕಾನ್ಸರ್ಟ್ ಆಯೋಜನೆಯಾಗಿದೆ. ಮುಂಚಿತವಾಗಿಯೇ ಒಪ್ಪಿಕೊಂಡಿರುವ ಈ ಕಾರ್ಯಕ್ರಮವನ್ನ ಕೇವಲ ತಮ್ಮ ಅನಾರೋಗ್ಯದ ಕಾರಣಕ್ಕಾಗಿ ರದ್ದುಗೊಳಿಸಲು ಸೋನು ನಿಗಮ್ ಇಷ್ಟಪಟ್ಟಿಲ್ಲ. ಎಷ್ಟೇ ನೋವಿದ್ದರೂ, ಧ್ವನಿಯಲ್ಲಿ ಏರುಪೇರಾಗಿದ್ದರೂ ತಮಗಾಗಿ ಕಾಯುತ್ತಿರುವ ಅಭಿಮಾನಿಗಳನ್ನ ನಿರಾಸೆಗೊಳಿಸಬಾರ್ದು ಎನ್ನುವ ಕಾರಣಕ್ಕೆ ಅವರು ಸ್ಟೇಜ್ ಹತ್ತಲು ನಿರ್ಧರಿಸಿದ್ದಾರೆ.
ಸೋನು ನಿಗಮ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅವರ ಆರೋಗ್ಯದ ಸ್ಥಿತಿ ಕಂಡು ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಅವರ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.