newsics.com/ನ್ಯೂಸಿಕ್ಸ್
ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಅನೇಕ ಮಂದಿ ಬಿಪಿ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಪಿ ಅನ್ನೋ ಪದ ಕೇಳಿದರೆ ಸಾಕು ಅನೇಕ ಮಂದಿ ಭಯಭೀತರಾಗುತ್ತಾರೆ ಮತ್ತು ಬೆವರಲು ಪ್ರಾರಂಭಿಸುತ್ತಾರೆ. ಇಂತಹ ಸಮಯದಲ್ಲಿ ಬಹುತೇಕ ಮಂದಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯುವುದಿಲ್ಲ. ಆದರೆ ಬಿಪಿ ಹೆಚ್ಚಾದಾಗ ಭಯಪಡದೇ ನಿಖರವಾಗಿ ಏನು ಮಾಡಬೇಕು ಮತ್ತು ತಕ್ಷಣ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯುವುದು ಮುಖ್ಯ. ಇನ್ನೂ ಈ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಹೃದ್ರೋಗ ತಜ್ಞ ಡಾ. ವಿಶಾಲ್ ಪಾಟೀಲ್ ಹಂಚಿಕೊಂಡಿದ್ದಾರೆ.
ಬಿಪಿ ಹೆಚ್ಚಾದಾಗ ವೈದ್ಯರನ್ನು ಸಂಪರ್ಕಿಸಿ!
ರಕ್ತದೊತ್ತಡ ಹೆಚ್ಚಾದ ನಂತರ ನಿಮಗೆ ತಲೆತಿರುಗಿದರೆ, ಅದು ದುರ್ಬಲತೆ ಅನಿಸಬಹುದು. ಆದರೆ ಪ್ರಮುಖ ವಿಚಾರವೆಂದರೆ ನಿಮ್ಮ ರಕ್ತದೊತ್ತಡ ಹೆಚ್ಚಾದಾಗ ಭಯಭೀತರಾಗದೇ ಶಾಂತವಾಗಿರಬೇಕು. ರಕ್ತದೊತ್ತಡ ಹೆಚ್ಚಾದ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಈ ಹೊತ್ತಲ್ಲಿ ಮಾತ್ರ ಬಿಪಿ ಟೆಸ್ಟ್ ಮಾಡಬೇಕು!
ನೀವು ನಿಮ್ಮ ರಕ್ತದೊತ್ತಡವನ್ನು ಯಂತ್ರದಲ್ಲಿ ಪರಿಶೀಲಿಸುತ್ತಿದ್ದರೆ ಎಚ್ಚರ. ಕೆಲವೊಮ್ಮೆ ಯಂತ್ರದಲ್ಲೇ ಸಮಸ್ಯೆ ಇರಬಹುದು. ಒಂದು ವೇಳೆ ನಿಮ್ಮ ರಕ್ತದೊತ್ತಡ ಹೆಚ್ಚಾಗಿದೆ ಎಂದು ತಿಳಿದು ಬಂದರೆ ಆತಂಕ ಪಡಬಾರದು. ರಕ್ತದೊತ್ತಡ ಹೆಚ್ಚಾದ ತಕ್ಷಣ ನೀವು ಯಾವುದಾದರೂ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳದಿದ್ದರೆ, ಮೊದಲು ನೀವು ರಿಲಾಕ್ಸ್ ಆಗಬೇಕು. ಎಂದಾದರೂ ನೀವು ಬಿಪಿ ಪರಿಶೀಲಿಸಬೇಕು ಅಂದುಕೊಂಡಿದ್ದರೆ, ಬೆಳಗ್ಗೆ ಹೊತ್ತು ಮಾತ್ರ ಬಿಪಿಯನ್ನು ಪರಿಶೀಲಿಸಿ. ನೀವು ಬಲ ಅಥವಾ ಎಡಭಾಗದಲ್ಲಿ ಬೇಕಾದರೂ ಮಲಗಿಕೊಂಡು ಬಿಪಿ ಟೆಸ್ಟ್ ಮಾಡಬಹುದು. ಆದರೆ ನೀವು ಯಾವುದೇ ಒತ್ತಡವಿಲ್ಲದೇ ಸಂಪೂರ್ಣ ಶಾಂತವಾಗಿದ್ದಾಗಷ್ಟೇ ಬಿಪಿ ಪರಿಶೀಲಿಸಬೇಕು. ಎಂದಿಗೂ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ.
ಬಿಪಿ ನಿಯಂತ್ರಣದಲ್ಲಿಡಲು ಮಾಡಬೇಕಾದ ಕೆಲಸಗಳು!
ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು, ನೀವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಜೊತೆಗೆ, ನಿಮ್ಮ ರಕ್ತದೊತ್ತಡ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದು ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ವ್ಯಾಯಾಮ ಮಾಡುವುದು ಸಹ ಬಹಳ ಮುಖ್ಯ. ಸರಿಯಾದ ರೀತಿಯ ವ್ಯಾಯಾಮ ಮಾಡಿ, ಧ್ಯಾನ ಮಾಡಿ. ಒತ್ತಡಕ್ಕೆ ಒಳಗಾಗಬೇಡಿ. ನೀವು ಎಲ್ಲವನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಿದರೆ ನಿಮ್ಮ ರಕ್ತದೊತ್ತಡ ಹೆಚ್ಚಾಗುವುದಿಲ್ಲ.