newsics.com/ನ್ಯೂಸಿಕ್ಸ್
ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪೈಪೋಟಿಗೆ ತೆರೆ ಬಿದ್ದಿದ್ದು, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನೂತನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಸಚಿವ ಸ್ಥಾನದ ಜೊತೆ ಅಧ್ಯಕ್ಷಗಿರಿ ಆಕಾಂಕ್ಷಿಯಾಗಿದ್ದ ಸತೀಶ್ ಜಾರಕಿಹೊಳಿಗೆ ನಿರಾಸೆಯಾಗಿದೆ.
ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದೆ. ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೇರಲಿದ್ದಾರೆ ಎಂದು ತಿಳಿದುಬಂದಿದೆ.
ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಸ್ಥಾನಕ್ಕೂ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಗಾದಿ ಕೈತಪ್ಪಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಬಿ.ಕೆ.ಹರಿಪ್ರಸಾದ್ ಅವರನ್ನು ಅಂತಿಮಗೊಳಿಸಿದ್ದು, ಹರಿಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಬಿ.ಕೆ. ಹರಿಪ್ರಸಾದ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯ ರಾಜೀನಾಮೆ ಬಳಿಕ ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿವುದು ನಿಶ್ಚಿತವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥನ ಪಟ್ಟಕ್ಕಾಗಿಯೂ ತೀವ್ರ ಪೈಪೋಟಿ ನಡೆದಿತ್ತು. ಆ ಪೈಕಿ ಮುಂಚೂಣಿಯಲ್ಲಿ ಸತೀಶ್ ಜಾರಕಿಹೊಳಿ ಹೆಸರು ಕೇಳಿಬಂದಿತ್ತು.
ಹೀಗಿದ್ದರೂ ಸಚಿವ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷಗಿರಿ ಎರಡನ್ನೂ ಅವರು ಕೇಳಿರೋದು ಹೈಕಮಾಂಡ್ಗೆ ತಲೆನೋವಾಗಿ ಮಾರ್ಪಟ್ಟಿತ್ತು. ಈ ನಡುವೆ ರೇಸ್ಗೆ ಸರ್ಪ್ರೈಸ್ ಆಗಿ ಹರಿಪ್ರಸಾದ್ ಹೆಸರೂ ಕೇಳಿಬಂದಿತ್ತು. ಆದರೆ ಈಗ ಅವರೇ ಕೆಪಿಸಿಸಿ ಅಧ್ಯಕ್ಷರಾಗೋದು ಕನ್ಫರ್ಮ್ ಎನ್ನಲಾಗಿದೆ.