newsics.com | ನ್ಯೂಸಿಕ್ಸ್
ಚೆನ್ನೈ: ತಮಿಳು ನಟ ‘ಜಯಂ’ ರವಿ (ರವಿ ಮೋಹನ್) ಹಾಗೂ ಅವರ ಪತ್ನಿ ಆರತಿ ನಡುವಿನ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಕೌಟುಂಬಿಕ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಬಿದ್ದಿದೆ. ಪರಸ್ಪರ ಆರೋಪಗಳ ಮೂಲಕ ಸದ್ದು ಮಾಡುತ್ತಿದ್ದ ಈ ಪ್ರಕರಣದಲ್ಲಿ ನಟ ಜಯಂ ರವಿಗೆ ದೊಡ್ಡ ಪ್ರಮಾಣದ ರಿಲೀಫ್ ಸಿಕ್ಕಿದ್ದು, ಪತ್ನಿ ಆರತಿ ಅವರ ಭಾರಿ ಮೊತ್ತದ ಜೀವನಾಂಶದ ಬೇಡಿಕೆಯನ್ನು ನ್ಯಾಯಾಲಯ ತಳ್ಳಿಹಾಕಿದೆ.
ವಿಚ್ಛೇದನ ಪ್ರಕರಣದಲ್ಲಿ ಪತ್ನಿ ಆರತಿ ಅವರು ತಮ್ಮ ದಿನನಿತ್ಯದ ನಿರ್ವಹಣಾ ವೆಚ್ಚಕ್ಕಾಗಿ ಪ್ರತಿ ತಿಂಗಳು ಬರೋಬ್ಬರಿ 40 ಲಕ್ಷ ರೂಪಾಯಿ ಅಂದರೆ ವರ್ಷಕ್ಕೆ 4.80 ಕೋಟಿ ರೂ. ಜೀವನಾಂಶ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಈ ಅತಿ ಭಾರಿ ಮೊತ್ತದ ಬೇಡಿಕೆಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ತಾತ್ಕಾಲಿಕವಾಗಿ ಪ್ರತಿ ತಿಂಗಳು ಕೇವಲ 3 ಲಕ್ಷ ರೂಪಾಯಿಗಳನ್ನು ಮಾತ್ರ ಜೀವನಾಂಶವಾಗಿ ಪಾವತಿಸುವಂತೆ ಆದೇಶಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜೀವನಾಂಶದ ವಿಚಾರದ ಜೊತೆಗೆ ಮಕ್ಕಳ ಪಾಲನೆ ಹಾಗೂ ಭೇಟಿ ಕುರಿತಂತೆಯೂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಪತ್ನಿ ಆರತಿ ತಮ್ಮ ಮಕ್ಕಳನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ರವಿ ಮೋಹನ್ ಈ ಹಿಂದೆ ಆರೋಪಿಸಿದ್ದರು. ಇದೀಗ ನಿರ್ದಿಷ್ಟ ನಿಯಮಗಳಿಗೆ ಒಳಪಟ್ಟು ತಂದೆ ರವಿ ಅವರು ತಮ್ಮ ಮಕ್ಕಳನ್ನು ಭೇಟಿಯಾಗಲು ನ್ಯಾಯಾಲಯ ಅಧಿಕೃತ ಅನುಮತಿ ನೀಡಿದೆ.
ಪ್ರಸ್ತುತ ನಟ ಜಯಂ ರವಿ ಅವರ ವೃತ್ತಿಜೀವನ ಹಾಗೂ ಸಂಭಾವನೆಯ ಮಿತಿಯನ್ನು ಗಮನಿಸಿದಾಗ, ತಿಂಗಳಿಗೆ 40 ಲಕ್ಷ ರೂ. ನೀಡುವುದು ಅವರಿಗೆ ತೀವ್ರ ಆರ್ಥಿಕ ಹೊರೆಯಾಗುತ್ತಿತ್ತು. ಸದ್ಯ ನ್ಯಾಯಾಲಯದ ಈ ಮಧ್ಯಂತರ ತೀರ್ಪಿನಿಂದ ನಟನಿಗೆ ದೊಡ್ಡ ಆರ್ಥಿಕ ಹೊರೆ ತಪ್ಪಿದಂತಾಗಿದ್ದು, ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.