newsics.com | ನ್ಯೂಸಿಕ್ಸ್
ಬಳ್ಳಾರಿ: ರಾಜ್ಯದ ಬಹುತೇಕ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮೃತದೇಹಗಳ ಕೊರತೆ ಎದುರಿಸುತ್ತಿದ್ದು, ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯಯನ ಮತ್ತು ಸಂಶೋಧನೆಗೆ ತೊಡಕಾಗುವ ಆತಂಕ ಕಾಡುತ್ತಿದೆ.
ರಾಜ್ಯದಲ್ಲಿ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಇತ್ತೀಚೆಗೆ ವೈದ್ಯಕೀಯ ಶಿಕ್ಷಣದತ್ತ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರುವ ಹಿನ್ನೆಲೆ ಎಂಬಿಬಿಎಸ್ ಪದವಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರವೇಶ ಪಡೆಯುವವರ ಸಂಖ್ಯೆ ಏರುತ್ತಿದೆ.
ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿಯಮಾವಳಿ ಪ್ರಕಾರ ತಲಾ 25 ವಿದ್ಯಾರ್ಥಿಗಳಿಗೆ ಒಂದು ಮಾನವ ಮೃತದೇಹ ಅಗತ್ಯ. ಆದರೆ, ಬಹುತೇಕ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಮಾನವ ಮೃತದೇಹಗಳು ಲಭ್ಯವಾಗುತ್ತಿಲ್ಲ.
250 ವಿದ್ಯಾರ್ಥಿಗಳಿಗೆ 6 ದೇಹ
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ)ದಲ್ಲಿ ಪ್ರಸ್ತುತ ಎಂಬಿಬಿಎಸ್ ಕೋರ್ಸ್‌ನಲ್ಲಿ 250 ಸೀಟ್‌ಗಳಿವೆ. ಮೃತ ದೇಹದ ಮೂಲಕ ಮನುಷ್ಯನ ದೇಹ ರಚನೆ, ಅಂಗಾಂಗಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.
ರೋಗಿಗಳಿಗೆ ಚಿಕಿತ್ಸೆ, ಶಸ್ತ್ರತ್ರಚಿಕಿತ್ಸೆಯ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ಇದಕ್ಕಾಗಿ, ಎಂಬಿಬಿಎಸ್ ಪದವಿಯಲ್ಲಿ ಶರೀರ ವಿಜ್ಞಾನ ವಿಷಯ ಅಧ್ಯಯನಕ್ಕಾಗಿ ನಿಗದಿತ ಸಂಖ್ಯೆಯಲ್ಲಿ ಮೃತದೇಹಗಳನ್ನು ಒದಗಿಸಬೇಕಾಗುತ್ತದೆ. ಎಂಸಿಐ ನಿಯಮಾವಳಿ ಪ್ರಕಾರ ಇಲ್ಲಿ 12ಕ್ಕೂ ಅಧಿಕ ಮೃತದೇಹಗಳು ಲಭ್ಯವಿರಬೇಕಿದೆ. ಆದರೆ, ಬಿಎಂಸಿಆರ್‌ಸಿಯಲ್ಲಿ 6 ಮೃತ ದೇಹಗಳು ಮಾತ್ರ ಇವೆ.
ಇದರ ಹೊರತಾಗಿ, ರಾಜ್ಯದ ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಸೇರಿ ಇತರೆ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೃತ ದೇಹಗಳು ದೊರೆಯುತ್ತಿಲ್ಲ ಎನ್ನುವ ಮಾತುಗಳಿವೆ.
ಮೃತದೇಹಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಕೊರತೆ ನೀಗಿಸಲು ಹಲವು ಕಾಲೇಜುಗಳಲ್ಲಿ ಕೃತಕ ದೇಹಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ ಎನ್ನಲಾಗಿದೆ. ಆದರೆ, ಕೃತಕ ಮತ್ತು ನೈಜ ಮೃತದೇಹ ಬಳಕೆ ನಡುವೆ ಸಾಕಷ್ಟು ವ್ಯತ್ಯಾಸಗಳಿದ್ದು, ಪರಿಣಾಮಕಾರಿ ಅಧ್ಯಯನ ಕಷ್ಟ ಸಾಧ್ಯವಾಗಿದೆ.
ಸಾಮಾನ್ಯವಾಗಿ ಒಂದು ಮೃತದೇಹವನ್ನು ಕನಿಷ್ಠ ಒಂದು ವರ್ಷ ಅವಧಿವರೆಗೆ ಪ್ರಾಯೋಗಿಕವಾಗಿ ಅಧ್ಯಯನಕ್ಕೆ ಬಳಸಬಹುದಾಗಿದೆ ಎನ್ನಲಾಗಿದ್ದು, ಸಮರ್ಪಕವಾಗಿ ಮೃತದೇಹಗಳು ದೊರಕಿದಲ್ಲಿ ಪರಿಣಾಮಕಾರಿ ಬೋಧನೆ, ಸಂಶೋಧನೆಗೆ ಸಹಕಾರಿಯಾಗಲಿದೆ.
ಕೊರತೆಗೆ ಕಾರಣವೇನು?
ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯಗಳು ಮೃತದೇಹವನ್ನು ದಾನವಾಗಿ ಪಡೆಯಬಹುದು. ಮೃತ ದೇಹವು 6 ಗಂಟೆಗಳ ಬಳಿಕ ಕೊಳೆಯಲು ಪ್ರಾರಂಭವಾಗುತ್ತದೆ. ಹೀಗಾಗಿ, ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ದೇಹವನ್ನು ದಾನವಾಗಿ ಪಡೆಯಬೇಕಾಗುತ್ತದೆ. ಅಲ್ಲದೆ, ಅಪರಿಚಿತ ಮೃತದೇಹವನ್ನು ಸಹ ವೈದ್ಯಕೀಯ ಸಂಶೋಧನೆಗೆ ಹಸ್ತಾಂತರಿಸಬಹುದಾಗಿದೆ.
ಆದರೆ, ವ್ಯಕ್ತಿಗಳು ಜೀವಿತಾವಧಿಯಲ್ಲಿ ದಾನಕ್ಕೆ ಪ್ರತಿಜ್ಞೆ ಕೈಗೊಂಡಿದ್ದರೂ ಮರಣ ಹೊಂದಿದ ಸಂದರ್ಭದಲ್ಲಿ ಕುಟುಂಬಸ್ಥರು ವೈದ್ಯಕೀಯ ಸಂಸ್ಥೆಗಳಿಗೆ ಮಾಹಿತಿ ನೀಡುತ್ತಿಲ್ಲ. ಅಂಗಾಂಗ ದಾನಕ್ಕೆ ಮಾತ್ರ ಸೀಮಿತವಾಗಿ ದೇಹದಾನದ ಕುರಿತ ಜಾಗೃತಿ ಕೊರತೆ, ಧಾರ್ಮಿಕ ನಂಬಿಕೆ, ಇತರೆ ರಾಜ್ಯಗಳಿಂದ ಮೃತದೇಹಗಳಿಗೆ ಹೆಚ್ಚಿನ ಹಣದ ಬೇಡಿಕೆ ಸೇರಿ ನಾನಾ ಕಾರಣಗಳಿಂದಾಗಿ ಮೃತದೇಹ ದಾನಕ್ಕೆ ಹಿನ್ನಡೆಯಾಗುತ್ತಿದೆ.
Rain info ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಗಳಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ