newsics.com | ನ್ಯೂಸಿಕ್ಸ್
ಕಾನ್ಪುರ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಟ್ಯಾಟೂ (ಹಚ್ಚೆ) ಹಾಕಿಸಿಕೊಳ್ಳುವ ಕ್ರೇಜ್ ಹೆಚ್ಚಾಗಿದೆ. ಆದರೆ, ಇದೇ ಹವ್ಯಾಸ ಮಹಿಳೆಯೊಬ್ಬರ ಜೀವನಕ್ಕೆ ಕಂಟಕ ತಂದಿಟ್ಟಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ. ಟ್ಯಾಟೂ ಪಾರ್ಲರ್ ಒಂದರಲ್ಲಿ ಹಚ್ಚೆ ಹಾಕಿಸಿಕೊಂಡ 32 ವರ್ಷದ ಮಹಿಳೆಗೆ ಎಚ್‌ಐವಿ (HIV) ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ದೆಹಲಿಯ ಟ್ಯಾಟೂ ಪಾರ್ಲರ್ ಒಂದರಲ್ಲಿ ಈ ಮಹಿಳೆ ಇತ್ತೀಚೆಗೆ ಹಚ್ಚೆ ಹಾಕಿಸಿಕೊಂಡಿದ್ದರು. ಅದಾದ ಕೆಲವೇ ವಾರಗಳಲ್ಲಿ ಆಕೆಯ ಜನನೇಂದ್ರಿಯದಲ್ಲಿ ತೀವ್ರ ಸ್ವರೂಪದ ಸೋಂಕು (Infection) ಕಾಣಿಸಿಕೊಂಡಿದೆ. ಇದರಿಂದ ತೀವ್ರ ಅಸ್ವಸ್ಥರಾದ ಮಹಿಳೆ ಚಿಕಿತ್ಸೆಗಾಗಿ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ಮೆಮೋರಿಯಲ್ (GVSM) ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು.
ಎಚ್‌ಐವಿ ಪತ್ತೆಯಾಗಿದ್ದು ಹೇಗೆ?
ಆಸ್ಪತ್ರೆಯ ಚರ್ಮರೋಗ ವಿಭಾಗಕ್ಕೆ ದಾಖಲಾಗಿದ್ದ ಮಹಿಳೆಗೆ ವೈದ್ಯರು ಚಿಕಿತ್ಸೆಯ ಭಾಗವಾಗಿ ಹೆಪಟೈಟಿಸ್-ಬಿ ಮತ್ತು ಎಚ್‌ಐವಿ ಪರೀಕ್ಷೆಗಳನ್ನು ನಡೆಸಿದ್ದರು. ಈ ವೇಳೆ ಮಹಿಳೆಗೆ ಎಚ್‌ಐವಿ ಪಾಸಿಟಿವ್ ಇರುವುದು ಕಂಡುಬಂದು ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆಗೆ ಆಸ್ಪತ್ರೆಯಲ್ಲಿ ಆಂಟಿ-ರೆಟ್ರೋವೈರಲ್ ಥೆರಪಿ (ART) ಚಿಕಿತ್ಸೆಯನ್ನು ಆರಂಭಿಸಲಾಗಿದೆ.
ಇನ್ನು, ಆಸ್ಪತ್ರೆಯ ವೈದ್ಯರಾದ ಡಾ. ಶ್ವೇತಾಂಕ್ ನೀಡಿರುವ ಮಾಹಿತಿ ಪ್ರಕಾರ, ಮಹಿಳೆ ಆಸ್ಪತ್ರೆಗೆ ಬರುವುದಕ್ಕಿಂತ ಎರಡು ವಾರಗಳ ಮುಂಚೆಯಷ್ಟೇ ದೆಹಲಿಯಲ್ಲಿ ಟ್ಯಾಟೂ ಮಾಡಿಸಿಕೊಂಡಿದ್ದರು. ಹಚ್ಚೆ ಹಾಕಿಸಿಕೊಂಡ ತಕ್ಷಣವೇ ಅವರ ಶರೀರದಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಬೇರೆ ಯಾರಿಗೋ ಬಳಸಿದ ಸೂಜಿಯನ್ನು (Needle) ಸಮರ್ಪಕವಾಗಿ ಸೋಂಕು ರಹಿತಗೊಳಿಸದೆ (Sterilize) ಈ ಮಹಿಳೆಗೂ ಬಳಸಿರುವುದರಿಂದಲೇ ಎಚ್‌ಐವಿ ತಗುಲಿದೆ ಎಂದು ವೈದ್ಯರು ಬಲವಾಗಿ ಶಂಕಿಸಿದ್ದಾರೆ. ಪ್ರಸ್ತುತ ವೈದ್ಯಕೀಯ ತಂಡವು ಎಚ್‌ಐವಿ ಹರಡುವಿಕೆಯ ನಿಖರ ಮೂಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದೆ.
ವೈದ್ಯರ ಎಚ್ಚರಿಕೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಎಆರ್‌ಟಿ ಚಿಕಿತ್ಸೆಯ ಮೂಲಕ ಎಚ್‌ಐವಿ ಸೋಂಕನ್ನು ಹತೋಟಿಯಲ್ಲಿಡಬಹುದು ಮತ್ತು ದೀರ್ಘಕಾಲದ ಚಿಕಿತ್ಸೆಯಿಂದ ನಿಯಂತ್ರಿಸಬಹುದು ಎಂದು ಡಾ. ಶ್ವೇತಾಂಕ್ ತಿಳಿಸಿದ್ದಾರೆ. ಇದರೊಂದಿಗೆ, ಟ್ಯಾಟೂ ಪಾರ್ಲರ್‌ಗಳಲ್ಲಿ ಸೂಜಿಗಳನ್ನು ಸಮರ್ಪಕವಾಗಿ ಆಟೋಕ್ಲೇವ್ ಮಾಡದೆ ಬಳಸುವುದರಿಂದ ಕೇವಲ ಎಚ್‌ಐವಿ ಮತ್ತು ಹೆಪಟೈಟಿಸ್ ಬಿ ಮಾತ್ರವಲ್ಲದೆ, ಇನ್ನು ಹತ್ತಾರು ಭೀಕರ ಚರ್ಮರೋಗಗಳು ಹರಡುತ್ತವೆ. ಹಾಗಾಗಿ ಸಾರ್ವಜನಿಕರು ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಸೂಜಿಗಳ ಸುರಕ್ಷತೆಯ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.
Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ