newsics.com| ನ್ಯೂಸಿಕ್ಸ್
ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಜಾಲವನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಭೇದಿಸಿದ್ದು, ಪ್ರಕಾರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶುಭದೀಪ್ ಸಿಂಗ್, ಗುರ್ಜಂತ್ ಸಿಂಗ್, ಸಜನ್ ಸಿಂಗ್ ಹಾಗೂ ಗಗನ್‌ಪ್ರೀತ್ ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರು ಪಂಜಾಬ್ ಮೂಲದವರು ಹಾಗೂ ಓರ್ವನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತರು ಐಎಸ್‌ಐ ಹ್ಯಾಂಡ್ಲರ್ ಶಹಜಾದ್ ಭಟ್ ಹಾಗೂ ಆತನ ಸಹಚರರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಗುರುತು ಪತ್ತೆಯಾಗದಂತೆ ನೋಡಿಕೊಳ್ಳಲು ಪಾಕಿಸ್ತಾನದಲ್ಲಿದ್ದ ಹ್ಯಾಂಡ್ಲರ್‌ಗಳು ಒದಗಿಸಿದ್ದ ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕವೇ ಪರಸ್ಪರ ಸಂಪರ್ಕದಲ್ಲಿದ್ದು, ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಆರೋಪಿಗಳು ದೆಹಲಿ–ಎನ್‌ಸಿಆರ್‌ನ ಪ್ರಮುಖ ಸಾರ್ವಜನಿಕ ಸ್ಥಳಗಳು ಮತ್ತು ಜನಸಂದಣಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಗ್ರ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹಲವು ದಿನಗಳಿಂದ ಗುಪ್ತಚರ ಮಾಹಿತಿ ಸಂಗ್ರಹಿಸಿ ವಿಶೇಷ ಕಾರ್ಯಾಚರಣೆ ನಡೆಸಿದ ಬಳಿಕ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರಿಂದ ವಿದೇಶಿ ಪಿಸ್ತೂಲ್, ಜೀವಂತ ಗುಂಡುಗಳು, ಮೊಬೈಲ್ ಫೋನ್‌ಗಳು, ಡಿಜಿಟಲ್ ಸಾಧನಗಳು ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಫೊರೆನ್ಸಿಕ್ ಪರೀಕ್ಷೆ ನಡೆಸಲಾಗುತ್ತಿದೆ. ಆರೋಪಿಗಳ ಮೂಲಕ ದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ ಇತರ ಐಎಸ್‌ಐ ಜಾಲಗಳ ಸಂಪರ್ಕ ಹಾಗೂ ಸಹಚರರ ಬಗ್ಗೆ ಮಾಹಿತಿ ಕಲೆಹಾಕುವ ಕಾರ್ಯ ಮುಂದುವರಿದಿದೆ.
ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸ್ ವಿಶೇಷ ಘಟಕವು ಕೇಂದ್ರ ಗುಪ್ತಚರ ಸಂಸ್ಥೆಗಳ ಸಹಯೋಗದೊಂದಿಗೆ ಮುಂದುವರಿಸಿದ್ದು, ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.