ಒಡಿಶಾದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ರಾಜ್ಯ ಸಾರಿಗೆ ಸಚಿವರ ಸೋದರಳಿಯನನ್ನು ಪೊಲೀಸರು ಬಂಧಿಸಿದ್ದಾರೆ.
20 ವರ್ಷದ ವಿದ್ಯಾರ್ಥಿನಿ ಗಂಜಾಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಘಟನೆಯ ಬಳಿಕ ಮೃತಳ ಮಾವ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆ ವೇಳೆ ವಿದ್ಯಾರ್ಥಿನಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಆರೋಪದಡಿ 24 ವರ್ಷದ ಬಿಸ್ವಜಿತ್ ಜೆನಾ ಎಂಬಾತನನ್ನು ಬಂಧಿಸಲಾಗಿದೆ. ಆತ ಒಡಿಶಾ ಸಾರಿಗೆ ಸಚಿವ ಬಿಭೂತಿ ಭೂಷಣ್ ಜೆನಾ ಅವರ ಸೋದರಳಿಯನಾಗಿದ್ದು, ಅದೇ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಗೋಲಂಥರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ವೈಜ್ಞಾನಿಕ ತಂಡ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿಗೆ ಸಚಿವರ ಸಂಬಂಧವಿದ್ದರೂ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.