ಬೆಂಗಳೂರು: ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಜಿಮ್ ಟ್ರೈನರ್ ವಿಜಯ್ ಕುಮಾರ್ (32) ಅವರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣ ಸಂಬಂಧ ನಾಲ್ವರನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದು, ಪ್ರಭಾವಿ ಬಿಲ್ಡರ್ ಪುತ್ರಿಯೊಂದಿಗಿನ ಪ್ರೇಮ ಸಂಬಂಧವೇ ಕೊಲೆಗೆ ಕಾರಣವಾಗಿದೆಯೇ ಎಂಬ ಅನುಮಾನ ಮೂಡಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ವಿಜಯ್ ಕುಮಾರ್ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನೆಲೆಸಿದ್ದರು. ಮದುವೆಯಾಗಿದ್ದರೂ ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಪ್ರಕರಣದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಕ್ಕಳಿಂದ ದೂರವಿದ್ದರು ಎನ್ನಲಾಗಿದೆ.
ಕುಟುಂಬದವರ ಆರೋಪದ ಪ್ರಕಾರ, ವಿಜಯ್ ಕೆಲಸ ಮಾಡುತ್ತಿದ್ದ ಜಿಮ್‌ಗೆ ಉದ್ಯಮಿ ಕಾಮಿನೇನಿ ಪ್ರಸಾದ್ ಅವರ ಪುತ್ರಿ ಬರುತ್ತಿದ್ದು, ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೇಮಕ್ಕೆ ತಿರುಗಿತ್ತು. ಕೆಲ ಸಮಯದ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿದ್ದರೂ, ಬಳಿಕ ಪೊಲೀಸರು ಅವರನ್ನು ಪತ್ತೆಹಚ್ಚಿ ವಾಪಸ್ ಕರೆತಂದಿದ್ದರು.
ಈ ಘಟನೆಯಿಂದ ಆಕ್ರೋಶಗೊಂಡಿದ್ದ ಬಿಲ್ಡರ್, ವಕೀಲನ ಮೂಲಕ ಸುಪಾರಿ ನೀಡಿ ವಿಜಯ್ ಹತ್ಯೆ ಮಾಡಿಸಿದ್ದಾನೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಹಾಗೂ ಬಾಬು ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಯ ಹಿಂದಿನ ನಿಜವಾದ ಕಾರಣ ಮತ್ತು ಸಂಚಿನ ಬಗ್ಗೆ ಬನ್ನೇರುಘಟ್ಟ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.