ಬೆಂಗಳೂರು: ನಂದಿನಿ ಹಾಲು ಮತ್ತು ಅದರ ಕೆಲವು ಉತ್ಪನ್ನಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿದ್ದ ಚರ್ಮರೋಗ ತಜ್ಞೆ ಡಾ. ಶರಣ್ಯ ಪದ್ಮ ಅವರಿಗೆ ಹೈಕೋರ್ಟ್ ಹಿನ್ನಡೆ ನೀಡಿದೆ. ನಂದಿನಿಯ ಸ್ಟ್ರಾಬೆರಿ ರುಚಿಯ ಹಾಲು ಸೇರಿದಂತೆ ಕೆಲವು ಉತ್ಪನ್ನಗಳಲ್ಲಿ ಕೃತಕ ಬಣ್ಣಗಳು ಮತ್ತು ಸಂರಕ್ಷಕಗಳಿದ್ದು, ಅವು ಸೇವನೆಗೆ ಸುರಕ್ಷಿತವಲ್ಲ ಎಂಬ ಅರ್ಥದ ವಿಡಿಯೋಗಳನ್ನು ಅವರು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಈ ಸಂಬಂಧ ಕೆಎಂಎಫ್ ಉದ್ಯೋಗಿಯೊಬ್ಬರ ದೂರಿನ ಮೇರೆಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಡಾ. ಶರಣ್ಯ ಪದ್ಮ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ತನಿಖೆ ಮುಂದುವರಿಯಲು ಅವಕಾಶ ನೀಡಿದೆ.