newsics.com
ಬೀದರ್: ಬಸ್ಸಿನಲ್ಲಿದ್ದ ಪಾನಮತ್ತ ಪ್ರಯಾಣಿಕನೊಬ್ಬ ನಶೆಯಲ್ಲಿ ಡ್ರೈವರ್ ಬಳಿ ತೆರಳಿ ಬಸ್ಸಿನ ಸ್ಟೇರಿಂಗ್ ಜೋರಾಗಿ ಹಿಡಿದ ಪರಿಣಾಮ ಬಸ್ ಮರಕ್ಕೆ ಡಿಕ್ಕಿಯಾಗಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೀದರ್ ಹೊರವಲಯದ ಶಹಾಪೂರ ರೈಲ್ವೆ ಗೇಟ್ ಬಳಿ ಸೋಮವಾರ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಸಾರಿಗೆ ಇಲಾಖೆಗೆ ಸೇರಿದ ಕೆಂಪು ಬಸ್ ತೆಲಂಗಾಣದ ಹೈದರಾಬಾದ್‌ದಿಂದ ಉದಗೀರ ಕಡೆಗೆ ತೆರಳುತ್ತಿತ್ತು. ಬಸ್ ಶಹಾಪುರ ಗೇಟ್ ಬಳಿ ಬರುತ್ತಿದ್ದಂತೆ ಕಂಠಪೂರ್ತಿ ಕುಡಿದು ಬಂದಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ ಸ್ಟೇರಿಂಗ್‌ನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ಬಸ್ ಚಾಲಕ ವಿಕಾಸ್, ಉದ್ಗೀರ್ ಮೂಲದ ಬಾಲಾಜಿ, ಪವನ್, ನೂರ್ ಅಹ್ಮದ್, ನರಸಿಂಗ್, ಪೂಜಾ, ಸುರೇಖಾ, ಸೃಷ್ಟಿ ಸೇರಿ 11 ಜನರಿಗೆ ಗಂಭೀರ ಗಾಯಗಳಾಗಿವೆ. ಕುಟುಂಬ ಸಮೇತ ತಿರುಪತಿಗೆ ಹೋಗಿ ಹಿಂತಿರುಗುತ್ತಿದ್ದ ಒಂದೇ ಕುಟುಂಬದ 8 ಜನರಿಗೆ ಗಾಯಗಳಾಗಿವೆ.