newsics.com/ನ್ಯೂಸಿಕ್ಸ್
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಭಾರತ ವನಿತಾ ಪಡೆಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಸ್ಪಿನ್ನರ್, ಕನ್ನಡತಿ ಶ್ರೇಯಾಂಕ ಪಾಟೀಲ್ (Shreyanka Patil) ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.
ಶ್ರೇಯಾಂಕ ಅವರ ಗಾಯ ಎಷ್ಟು ಗಂಭೀರವಾಗಿದೆಯೆಂದರೆ ಅವರಿಗೆ ನಡೆಯಲು ಸಹ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಗಿದೆ. ಮೇಲ್ನೋಟಕ್ಕೆ ಶ್ರೇಯಾಂಕ ಅವರ ಗಾಯ ಗಂಭೀರವಾಗಿರುವಂತೆ ಕಾಣುತ್ತಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಕ್ಯಾನ್ನಿಂಗ್ ವರದಿ ಬಂದ ಬಳಿಕವಷ್ಟೇ ಶ್ರೇಯಾಂಕ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಖಚಿತವಾಗಿ ತಿಳಿಯಲಿದೆ.
ಶ್ರೇಯಾಂಕಾಗೆ ಗಂಭೀರ ಗಾಯ
ಟೀಂ ಇಂಡಿಯಾ ನೀಡಿದ 209 ರನ್ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡದ ಇನ್ನಿಂಗ್ಸ್‌ನ ಆರನೇ ಓವರ್‌ನ ಮೊದಲ ಎಸೆತದಲ್ಲಿ ಈ ದುರಂತ ಸಂಭವಿಸಿತು. ಈ ಪಂದ್ಯದಲ್ಲಿ ಮೊದಲ ಓವರ್ ಬೌಲ್ ಮಾಡಲು ಬಂದ ಶ್ರೇಯಾಂಕ ಪಾಟೀಲ್ ಎಸೆದ ಮೊದಲ ಎಸೆತವನ್ನು ಸ್ಟ್ರೈಕ್‌ನಲ್ಲಿದ್ದ ಮೊಲ್ಕೆನ್‌ಬೋರ್ ಮಿಡ್-ಆನ್ ಕಡೆಗೆ ಆಡಿದರು. ಹೀಗಾಗಿ ಶ್ರೇಯಾಂಕ ಬೌಲಿಂಗ್ ಮಾಡಿದ ಬಳಿಕ ಚೆಂಡನ್ನು ಹಿಡಿಯಲು ಅದರ ಹಿಂದೆ ಓಡಿದರು. ಚೆಂಡಿನ ಬಳಿ ಹೋದ ಶ್ರೇಯಾಂಕ ಅದನ್ನು ತೆಗೆದುಕೊಳ್ಳಲು ಕೆಳಕ್ಕೆ ಬಾಗಿದರು. ಈ ಪ್ರಕ್ರಿಯೆಯಲ್ಲಿ ಶ್ರೇಯಾಂಕ ಸಮತೋಲನ ಕಳೆದುಕೊಂಡರು. ಹೀಗಾಗಿ ಅವರ ಬಲಗಾಲು ತಿರುಚಿತು.
ಇದರಿಂದ ಶ್ರೇಯಾಂಕ ತೀವ್ರ ನೋವಿನಿಂದ ಮೈದಾನದಲ್ಲೇ ಬಿದ್ದು ನರಳಲು ಶುರು ಮಾಡಿದರು. ಶ್ರೇಯಂಕಾ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ಅಂಪೈರ್‌ಗಳು ಮತ್ತು ತಂಡದ ಸದಸ್ಯರು ತಕ್ಷಣವೇ ಫಿಸಿಯೋ ಅವರನ್ನು ಮೈದಾನಕ್ಕೆ ಕರೆಸಿದರು. ಶ್ರೇಯಾಂಕ ಅವರನ್ನು ಪರೀಕ್ಷಿಸಿದ ಫಿಸಿಯೋ ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಡಗೌಟ್ಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಶ್ರೇಯಾಂಕಗೆ ಸರಿಯಾಗಿ ನಿಲ್ಲಲು ಸಹ ಸಾಧ್ಯವಾಗಲಿಲ್ಲ.
ಕಣ್ಣೀರಿಡುತ್ತ ಮೈದಾನ ತೊರೆದ ಶ್ರೇಯಾಂಕ
ಹೀಗಾಗಿ ಕಾರ್ಟ್ ಮತ್ತು ಸ್ಟ್ರೆಚರ್ ಅನ್ನು ತಕ್ಷಣವೇ ಮೈದಾನಕ್ಕೆ ತರಬೇಕಾಯಿತು. ಶ್ರೇಯಂಕಾ ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಶ್ರೇಯಂಕಾ ಮೈದಾನದಿಂದ ಹೊರಡುವಾಗ ಕಣ್ಣೀರಿಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಹಾಗೆಯೇ ಅವರ ಮುಖದಲ್ಲಿ ನೋವು ಮತ್ತು ನಿರಾಶೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ತಂಡದ ಇತರ ಆಟಗಾರ್ತಿಯರು ಕೂಡ ಶ್ರೇಯಾಂಕರನ್ನು ಬೇಸರದಲ್ಲೇ ಬೀಳ್ಕೊಟ್ಟರು.
ಈ ಹಿಂದೆಯೂ ಶ್ರೇಯಾಂಕರನ್ನು ಕಾಡಿದ್ದ ಗಾಯ
ಶ್ರೇಯಾಂಕ ಪಾಟೀಲ್ ಗಾಯಕ್ಕೆ ತುತ್ತಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಕಾಲು ಮತ್ತು ಬೆರಳಿನ ಗಾಯಗಳಿಂದ ಬಳಲುತ್ತಿದ್ದರು. ಇದೀಗ ಶ್ರೇಯಾಂಕ ಹೊಸ ಗಾಯಕ್ಕೆ ತುತ್ತಾಗಿರುವುದು ತಂಡವನ್ನು ಸಂಕಷ್ಟಕ್ಕೀಡು ಮಾಡಿದೆ. ಏಕೆಂದರೆ ಶ್ರೇಯಾಂಕ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದರು. ಇದಕ್ಕೂ ಮೊದಲು, 2024 ರ ಏಷ್ಯಾಕಪ್ ಸಮಯದಲ್ಲಿ, ಶ್ರೇಯಾಂಕಾ ಅವರ ಬೆರಳಿಗೆ ಗಂಭೀರವಾದ ಗಾಯವಾಗಿತ್ತು. ಹೀಗಾಗಿ ಅವರು 14 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ಹೊರಗಿದ್ದರು. ಇದರ ಜೊತೆಗೆ ಐಪಿಎಲ್ ಸಮಯದಲ್ಲೂ ಶ್ರೇಯಾಂಕ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ಐಸಿಸಿ ಟೂರ್ನಿಯಲ್ಲಿ ಶ್ರೇಯಾಂಕ ಗಾಯಗೊಂಡಿದ್ದಾರೆ. ದೇವರ ದಯೆಯಿಂದ ಶ್ರೇಯಾಂಕಗೆ ಆಗಿರುವ ಗಾಯ ಗಂಭೀರವಾಗಿರದೆ ಅವರು ತಂಡದ ಪರ ಆದಷ್ಟು ಬೇಗ ಕಣಕ್ಕಿಳಿಯಲಿ ಎಂಬುದು ಕೋಟ್ಯಾಂತರ ಭಾರತೀಯರ ಪ್ರಾರ್ಥನೆಯಾಗಿದೆ.
25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ವೈರಲ್ ವಿಡಿಯೋ ನೋಡಿ