ಇತ್ತೀಚೆಗೆ ಭಿಕ್ಷಾಟನೆ ಮಾಡುವ ಜಾಲ ವಿಪರೀತವಾಗಿ ಹಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ವಿಜಯನಗರ ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಮಕ್ಕಳೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ಜಾಲದ ಮೇಲೆ ಸೋಮವಾರ(ಜೂನ್.1ರಂದು) ದಾಳಿ ನಡೆಸಿದ ಜಿಲ್ಲಾಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಯ ಜಂಟಿ ತಂಡವು ಒಟ್ಟು 6 ಮಕ್ಕಳು ಹಾಗೂ ಅವರ 3 ತಾಯಂದಿರನ್ನು ರಕ್ಷಿಸಿದೆ.
ನಗರದ ಡಾ.ಪುನೀತ್ ರಾಜಕುಮಾರ್ ಸರ್ಕಲ್ ಬಳಿ ತಾಯಂದಿರು ಮಕ್ಕಳೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿರುವ ಕುರಿತು ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು. ಇದರನ್ವಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರು, ಆಪ್ತ ಸಮಾಲೋಚಕರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಅಕ್ಕಪಡೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಶಾಲೆಗೆ ರಜೆ ಇರುವ ಕಾರಣ ಭಿಕ್ಷಾಟನೆ
ಭಿಕ್ಷಾಟನೆ ನಡೆಸುತ್ತಿದ್ ಸ್ಥಳದಲ್ಲಿ ಕಾರ್ಯಚರಣೆ ನಡೆಸಿ ಪರಿಶೀಲಿಸಿದಾಗ 18 ವರ್ಷದೊಳಗಿನ 6 ಮಕ್ಕಳು ಹಾಗೂ ಮೂವರು ಮಹಿಳೆಯರು ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಮಾಡುತ್ತಿರುವುದು ಕಂಡು ಬಂದಿತ್ತು. ತಕ್ಷಣವೇ ಎಲ್ಲರನ್ನೂ ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಾಲಯಕ್ಕೆ ಕರೆ ತರಲಾಯಿತು. ರಕ್ಷಣೆಗೊಳಗಾದವರಲ್ಲಿ ಕೊಪ್ಪಳ ಜಿಲ್ಲೆಗೆ ಸೇರಿದ ಮೂವರು ಹೆಣ್ಣು ಮಕ್ಕಳು 6 ವರ್ಷದೊಳಗಿನವರು ಹಾಗೂ 14 ವರ್ಷದ ಮತ್ತೊಬ್ಬ ಬಾಲಕಿ ಸೇರಿದ್ದಾರೆ.
ಉಳಿದಂತೆ ಇಬ್ಬರು ಗಂಡು ಮಕ್ಕಳು (10 ಮತ್ತು 12 ವರ್ಷ) ಬಳ್ಳಾರಿ ಮೂಲದವರಾಗಿದ್ದು, ”ಶಾಲೆಗೆ ರಜೆ ಇರುವ ಕಾರಣ ತಾಯಿ ತನ್ನೊಂದಿಗೆ ಕರೆದುಕೊಂಡು ಬಂದಿದ್ದಾಗಿ,” ವಿಚಾರಣೆ ವೇಳೆ ತಿಳಿಸಿದ್ದಾರೆ. ”ಈ ಇಬ್ಬರು ಬಾಲಕರು ಶಾಲೆಗೆ ಹಾಜರಾಗುತ್ತಿರುವುದನ್ನು ಶಾಲಾ ಮುಖ್ಯಗುರುಗಳಿಂದ ದೃಢೀಕರಿಸಿಕೊಳ್ಳಲಾಗಿದೆ,” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಯಂದಿರಿಗೆ ಎಚ್ಚರಿಕೆ ನೀಡಿ ಬಿಡುಗಡೆ
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಗಮನಕ್ಕೆ ವಿಷಯ ತರಲಾಗಿದ್ದು, ಮಕ್ಕಳ ಶಿಕ್ಷಣದ ಕುರಿತು ನಿರಂತರ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ತಾಯಂದಿರಿಗೆ ಎಚ್ಚರಿಕೆ ನೀಡಿ, ಇನ್ನು ಮುಂದೆ ಭಿಕ್ಷಾಟನೆ ನಡೆಸುವುದಿಲ್ಲ ಎಂದು ಲಿಖಿತ ಹೇಳಿಕೆ ಪಡೆದ ನಂತರ ಅವರನ್ನು ಸ್ವಂತ ಊರುಗಳಿಗೆ ಕಳುಹಿಸಿ ಕೊಡಲಾಯಿತು. ಈ ವೇಳೆ, ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕ ಚಿದಾನಂದ, ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರ ಶ್ರೀಕಾಂತ್ ಸೇರಿ ಇತರರಿದ್ದರು.