newsics.com/ನ್ಯೂಸಿಕ್ಸ್
ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆದ ಆರ್‌ಸಿಬಿ ಸಾಧನೆಯನ್ನು ಮಾಜಿ ಮಾಲೀಕ ವಿಜಯ್ ಮಲ್ಯ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ. ನಮ್ಮ ದೊಡ್ಡ ಸಿಂಹಗಳು ಜೋರಾಗಿ ಗರ್ಜಿಸಿ ಹೆಮ್ಮೆ ತಂದಿವೆ ಎಂದು ಮಲ್ಯ ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಸಹ ಭಾರೀ ಪ್ರತಿಕ್ರಿಯೆ ನೀಡಿದ್ದಾರೆ.
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ 5 ವಿಕೆಟ್ ಗಳ ಜಯ ದಾಖಲಿಸುವ ಮೂಲಕ ಪ್ರಶಸ್ತಿ ಮೇಲೆ ಹಕ್ಕು ಸ್ಥಾಪಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ಪಡೆ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಗಳನ್ನು ಗಳಿಸಿತು. ಇದಕ್ಕುತ್ತರವಾಗಿ ಆರ್ ಸಿಬಿಯು 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಅಜೇಯ 75 ರನ್ ಗಳಿಸದ ವಿರಾಟ್ ಕೊಹ್ಲಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.
ಆರ್‌ಸಿಬಿ ಆರ್‌ಸಿಬಿ…. ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆದ ನಿಮಗೆ ಅಭಿನಂದನೆಗಳು. ನಮ್ಮ ದೊಡ್ಡ ಸಿಂಹಗಳು ಜೋರಾಗಿ ಗರ್ಜಿಸಿ ನಮ್ಮೆಲ್ಲರಿಗೂ ಅಪಾರ ಹೆಮ್ಮೆ ತಂದಿವೆ. ನಿಜಕ್ಕೂ ಅದ್ಭುತ ಪ್ರದರ್ಶನ,” ಎಂದು ಬರೆದುಕೊಂಡಿದ್ದಾರೆ.
ಅವರ ಈ ಪೋಸ್ಟ್ ಗೆ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. ನೆಟ್ಟಿಗರೊಬ್ಬರು “ವಿಜಯ ಮಲ್ಯ, ನಾಳೆ ಬೆಳಗ್ಗೆ 11 ಗಂಟೆಗೆ ಕರೋಲ್ ಬಾಗ್ ನ ಬ್ಯಾಂಕ್ ಶಾಖೆಯಲ್ಲಿ ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆಗೆ ಸಣ್ಣ ಪಾರ್ಟಿ ಇಧೆ. ದಯವಿಟ್ಟು ಸ್ವಲ್ಪ ಬೇಗನೇ ಬಂದುಬಿಡಿ.” ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು “Congratulations ವಿಜಯ್ ಮಲ್ಯ… ಭಾರತಕ್ಕೆ ಯಾವಾಗ ವಾಪಸ್ ಬರುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಈ ಬಾರಿ ಪಾಡ್ ಕಾಸ್ಟ್ ಅನ್ನು ಎಸ್ ಬಿಐ ಕಛೇರಿಯಲ್ಲಿ ಮಾಡಿ, ತುಂಬಾ ತಮಾಷೆಯಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಒಂದು ವೇಳೆ ಆರ್ ಸಬಿ ಮೂರನೇ ಬಾರಿ ಕಪ್ ಗೆದ್ದಿದ್ದೇ ಆಧಲ್ಲಿ ಟ್ರೋಫಿಯನ್ನು ತಾವು ಎತ್ತಿಕೊಳ್ಳುವುದಕ್ಕಾದರೂ ಭಾರತದ ನಾಗರಿಕತೆಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಮಹನೀಯರೇ ಎಂದು ಮತ್ತೊಬ್ಬ ನೆಟ್ಟಿಗರು ಕಾಲೆಳೆದಿದ್ದಾರೆ.