newsics.com/ನ್ಯೂಸಿಕ್ಸ್
ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ʻದೃಶ್ಯಂ 3’ ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ರಿಲೀಸ್ ಆದ ಕೇವಲ ಏಳು ದಿನಗಳಲ್ಲೇ ಈ ಸಿನಿಮಾ ಮಾಲಿವುಡ್‌ನಲ್ಲಿ ದಾಖಲೆ ಬರೆದಿದೆ.
ವಾರದ ದಿನಗಳಲ್ಲಿ ಸಹಜವಾಗಿಯೇ ಕಲೆಕ್ಷನ್ ಕೊಂಚ ಕುಸಿದಿತ್ತಾದರೂ, ಬುಧವಾರ (ಮೇ 27) ಚಿತ್ರದ ಗಳಿಕೆಯಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬಂದಿದೆ. ಇದರೊಂದಿಗೆ ಬಿಡುಗಡೆಯಾದ ಕೇವಲ 7 ದಿನಗಳಲ್ಲೇ ಸಿನಿಮಾ ಭಾರತದಾದ್ಯಂತ 75 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ಅಂಕಿ-ಅಂಶಗಳ ಪ್ರಕಾರ, 7ನೇ ದಿನ ಈ ಚಿತ್ರ ಭಾರತದಲ್ಲಿ ಬರೋಬ್ಬರಿ 6.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶೇಷವೆಂದರೆ, ಮಂಗಳವಾರ ಈ ಚಿತ್ರ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಂದು (ಮೇ 28) ಬಕ್ರೀದ್ ಪ್ರಯುಕ್ತ ಸರ್ಕಾರಿ ರಜೆ ಇದ್ದು, ಚಿತ್ರ ಮತ್ತಷ್ಟು ಗಳಿಸಬಹುದು. ಭಾರತದಲ್ಲಿ ಚಿತ್ರದ 7 ದಿನಗಳ ಒಟ್ಟು ನೆಟ್ ಕಲೆಕ್ಷನ್ 75.30 ಕೋಟಿ ರೂಪಾಯಿಗೆ ತಲುಪಿದ್ದು, ಗ್ರಾಸ್ ಕಲೆಕ್ಷನ್ 87.38 ಕೋಟಿ ರೂಪಾಯಿ ಮುಟ್ಟಿದೆ. ಭಾರತದಷ್ಟೇ ವಿದೇಶದಲ್ಲೂ ಈ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. 7ನೇ ದಿನ ವಿದೇಶಿ ಮಾರುಕಟ್ಟೆಯಿಂದಲೇ ಚಿತ್ರಕ್ಕೆ 5 ಕೋಟಿ ರೂಪಾಯಿ ಹರಿದುಬಂದಿದೆ. ಇದರೊಂದಿಗೆ ವಿದೇಶದ ಒಟ್ಟು ಗ್ರಾಸ್ ಗಳಿಕೆ ಬರೋಬ್ಬರಿ 95.70 ಕೋಟಿ ರೂಪಾಯಿಗೆ ತಲುಪಿದೆ.
ಇನ್ನು ಕೇವಲ ಎರಡು ದಿನಗಳಲ್ಲಿ ಸಿನಿಮಾ ಸುಲಭವಾಗಿ 200 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.