newsics.com/ನ್ಯೂಸಿಕ್ಸ್
ಮಂಚು ಮನೋಜ್ ಅಭಿನಯದ ತೆಲುಗು ಚಿತ್ರ ಪೊಟುಗಾಡು ಮೂಲಕ ಚಿತ್ರರಂಗಕ್ಕೆ ಬಂದವರು ಅನುಪ್ರಿಯಾ ಗೋಯೆಂಕಾ. ಆ ನಂತರ ಹಿಂದಿಯಲ್ಲಿಯೇ ಬ್ಯುಸಿಯಾದ ಉತ್ತರ ಪ್ರದೇಶದ ಈ ಚೆಲುವೆ ಜಾನ್ ಅಬ್ರಾಹಿಂ ಮತ್ತು ವರುಣ್ ಧವನ್ ಅಭಿನಯದ ಡಿಶೂಂ ಚಿತ್ರದಲ್ಲಿ ಕಾಣಿಸಿಕೊಂಡರು.
ಇದೀಗ ನಟಿ ವೇಶ್ಯಾವೃತ್ತಿಯೂ ಕೂಡ ಸಮಾಜ ಸೇವೆ, ಮಹಿಳೆಯರು ಸುರಕ್ಷಿತವಾಗಿರಲು ಅವರೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ.ಸದ್ಯ ಅನುಪ್ರಿಯಾ ಗೋಯೆಂಕಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ.
ನಾಗರಿಕ ಜಗತ್ತು ಇದನ್ನು ಸಮಾಜಕ್ಕೆ ಅಂಟಿದ ಶಾಪ ಎಂದು ಕರೆದು ದೂರ ಇಡಲು ಪ್ರಯತ್ನಿಸಿದರೂ, ಇದೇ ಸಮಾಜದ ಒಳಗಿನ ಹಸಿವು ಮತ್ತು ಬೇಡಿಕೆಗಳು ಈ ಕರಾಳ ವ್ಯವಸ್ಥೆಯನ್ನು ಎಂದಿಗೂ ಜೀವಂತವಾಗಿಟ್ಟಿವೆ. ಇದು ಶೋಷಣೆ, ಮೌನ ಮತ್ತು ತಾರತಮ್ಯದ ಒಂದು ನಿರಂತರ ಚಕ್ರವಾಗಿ ಮಾರ್ಪಟ್ಟಿದ್ದು ಸದ್ಯ ಇದೇ ವೇಶ್ಯಾವೃತ್ತಿಯನ್ನು ಅನುಪ್ರಿಯಾ ಗೋಯೆಂಕಾ ಸಮಾಜ ಸೇವೆಗೆ ಹೋಲಿಸಿದ್ದಾರೆ. ಈ ಮೂಲಕ ಚರ್ಚೆಗೆ ಮುನ್ನುಡಿಯನ್ನು ಬರೆದಿದ್ದಾರೆ.
ಈ ಕುರಿತು ”ಫಿಲ್ಮಿಗ್ಯಾನ್”ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅನುಪ್ರಿಯಾ ಗೋಯೆಂಕಾ, ”ನಮ್ಮ ದೇಶದಲ್ಲಿ ಜೀವನೋಪಾಯಕ್ಕೆ ಹಲವರು ವಲಸೆ ಹೋಗುತ್ತಾರೆ. ಹೆಂಡತಿ ಮತ್ತು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಆರು ತಿಂಗಳಿಂದ ಒಂದು ವರ್ಷದವರೆಗೆ ಗುರುತು ಪರಿಚಯ ಇರದ ಊರುಗಳಲ್ಲಿ ವಾಸ ಮಾಡುತ್ತಾರೆ, ಇಂತಹ ಕಠಿಣ ಸಂದರ್ಭದಲ್ಲಿ ಅವರಿಗೆ ಕೇವಲ ದೈಹಿಕ ಮತ್ತು ಮಾನಸಿಕ ಸಾಂಗತ್ಯದ ತೀವೃ ಅಗತ್ಯ ಇರುತ್ತೆ. ಆಗ ವೇಶ್ಯಾವೃತ್ತಿಯಲ್ಲಿರುವ ಮಹಿಳೆಯರು ಅವರ ಅಗತ್ಯವನ್ನು ಪೂರೈಸುವ ಮೂಲಕ, ಸಮಾಜದ ಒಂದು ದೊಡ್ಡ ವರ್ಗ ಮಾನಸಿಕವಾಗಿ ಕುಸಿಯದಂತೆ ತಡೆಯುತ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು ವೇಶ್ಯಾವೃತ್ತಿ ನಮ್ಮ ಸಮಾಜಕ್ಕೆ ಸುರಕ್ಷಾ ಕವಚ ಇದ್ದಂತೆ ಎಂದು ವಾದ ಮಾಡಿರುವ ಅನುಪ್ರಿಯಾ ಗೋಯೆಂಕಾ, “ಇಂತಹ ಸೇವೆಗಳು ಇರುವುದರಿಂದಲೇ ಉಳಿದ ಮಹಿಳೆಯರು ರಸ್ತೆಗಳಲ್ಲಿ ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗುತ್ತಿದೆ” ಎಂದು ಹೇಳಿದ್ದಾರೆ.ಅನುಪ್ರಿಯಾ ಪ್ರಕಾರ, ಈ ವ್ಯವಸ್ಥೆ ಸಮಾಜದಲ್ಲಿ ಉಂಟಾಗುವ ವಿಕೃತ ಒತ್ತಡವನ್ನು ತಡೆದು, ಇತರ ಹೆಣ್ಣುಮಕ್ಕಳನ್ನು ಕಾಮುಕರಿಂದ ರಕ್ಷಿಸುವಲ್ಲಿ ಪರೋಕ್ಷವಾಗಿ ಸಹಕಾರಿಯಾಗಿದೆ
ಭೀಕರ ಬಸ್ ಅಪಘಾತ: ಇನ್ಸ್ ಪೆಕ್ಟರ್ ಸೇರಿ 6 ಜನ ಸಾವು ; 10 ಜನರ ಸ್ಥಿತಿ ಗಂಭೀರ