newsics.com/ನ್ಯೂಸಿಕ್ಸ್
ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ನಂತರ ತೀವ್ರ ವಿಳಂಬವಾಗುತ್ತಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಸಿಲಿಂಡರ್ ಬುಕ್ ಮಾಡಿದ ನಂತರ, ‘ಮುಂದಿನ ಒಂದು ವಾರದಲ್ಲಿ ಸಿಲಿಂಡರ್ ಡೆಲಿವರಿ ಮಾಡಲಾಗುವುದು’ ಎಂದು ಕಂಪನಿಗಳಿಂದ ಎಸ್‌ಎಂಎಸ್ (SMS) ಬರುತ್ತದೆ.
ಆದರೆ ವಾರ ಕಳೆದರೂ ಸಿಲಿಂಡರ್ ಕೈ ಸೇರುತ್ತಿಲ್ಲ. ಅದರ ಬದಲಿಗೆ, ನಿಮ್ಮ ಸಿಲಿಂಡರ್ ತಲುಪಿಸಲು ಮತ್ತೊಂದು ವಾರ ಸಮಯ ಬೇಕಾಗಬಹುದು, ಅನಾನುಕೂಲತೆಗೆ ವಿಷಾದಿಸುತ್ತೇವೆ” ಎಂಬ ಮತ್ತೊಂದು ಸಂದೇಶ ಕಂಪನಿಗಳಿಂದ ಬರುತ್ತಿದೆ. ಇದರಿಂದಾಗಿ ಗ್ರಾಹಕರು ಒಂದು ಸಿಲಿಂಡರ್‌ಗಾಗಿ ಕನಿಷ್ಠ 10 ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಗೃಹಬಳಕೆಯ (ಡೊಮೆಸ್ಟಿಕ್) ಗ್ಯಾಸ್ ಸಿಲಿಂಡರ್ ಬೆಲೆ ರೂ. 965 ರಷ್ಟಿದೆ. ಇದಕ್ಕೆ ಡೆಲಿವರಿ ಚಾರ್ಜ್ ಸೇರಿದರೆ ಗ್ರಾಹಕರು ಸುಮಾರು ರೂ. 1,000 ವರೆಗೆ ಪಾವತಿಸಬೇಕಾಗುತ್ತಿದೆ.
ಗ್ಯಾಸ್ ಬುಕಿಂಗ್‌ಗೆ ಕೇಂದ್ರದ ಹೊಸ ನಿಯಮಗಳು
ಗ್ಯಾಸ್ ಕೊರತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಳೆದ ಮಾರ್ಚ್ ತಿಂಗಳಿನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇವು ಈಗಲೂ ಮುಂದುವರಿದಿವೆ:
ನಗರ ಪ್ರದೇಶಗಳಲ್ಲಿ: ಒಂದು ಸಿಲಿಂಡರ್ ಬುಕ್ ಮಾಡಿದ ನಂತರ, ಮತ್ತೊಂದು ಸಿಲಿಂಡರ್ ಬುಕ್ ಮಾಡಲು 25 ದಿನಗಳ ಕಾಯುವಿಕೆ ಅವಧಿ ಇರಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ: ಒಂದು ಸಿಲಿಂಡರ್ ಬುಕ್ ಮಾಡಿದ ನಂತರ, ಎರಡನೇ ಸಿಲಿಂಡರ್‌ಗಾಗಿ ಬರೋಬ್ಬರಿ 45 ದಿನಗಳ ಕಾಲ ಕಾಯಬೇಕಾಗುತ್ತದೆ.
ತೈಲ ಕಂಪನಿಗಳು ಪ್ರತಿ ತಿಂಗಳ 1ನೇ ತಾರೀಖಿನಂದು ಹೊಸ ದರಗಳನ್ನು ಘೋಷಿಸುತ್ತವೆ. ಕಳೆದ ಎರಡು ತಿಂಗಳುಗಳಿಂದ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.