newsics.com | ನ್ಯೂಸಿಕ್ಸ್
ನವದೆಹಲಿ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಜಾಲವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಅತ್ಯಂತ ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಪರೀಕ್ಷಾ ಅಕ್ರಮ ಎಸಗುವವರಿಗೆ ಬರೋಬ್ಬರಿ ₹10 ಕೋಟಿ ದಂಡ ಹಾಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ.
‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ-2024’ಕ್ಕೆ ಪ್ರಮುಖ ತಿದ್ದುಪಡಿಗಳನ್ನು ತರಲಾಗುತ್ತಿದ್ದು, ಮುಂಬರುವ ಸೋಮವಾರ ಸಂಸತ್ತಿನಲ್ಲಿ ಈ ವಿಧೇಯಕವನ್ನು ಮಂಡಿಸುವ ಸಾಧ್ಯತೆಯಿದೆ. ಹೊಸ ಕಾಯ್ದೆಯಡಿ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಯನ್ನು ಕೇವಲ 3 ತಿಂಗಳೊಳಗೆ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಶೀಘ್ರ ವಿಲೇವಾರಿಗಾಗಿ ವಿಶೇಷ ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ನಡೆದ ನೀಟ್-ಯುಜಿ (NEET-UG) ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸೋರಿಕೆ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ದೇಶಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದವು. ಈ ಬೆನ್ನಲ್ಲೇ ಯುವಜನತೆಯ ಭವಿಷ್ಯದ ಜೊತೆ ಆಟವಾಡುವ ಸಿಂಡಿಕೇಟ್‌ಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.