newsics.com/ನ್ಯೂಸಿಕ್ಸ್
ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ, ಗರ್ಭಧಾರಣೆಗೆ ಮುನ್ನ ತಂದೆಯ ಆರೋಗ್ಯ ಮತ್ತು ಆತನ ಜೀವನಶೈಲಿಯೂ ಅಷ್ಟೇ ಮಹತ್ವದ್ದಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ತಂದೆಯ ವಯಸ್ಸು, ಒತ್ತಡದ ಜೀವನ, ಧೂಮಪಾನ, ಮದ್ಯಪಾನ ಮತ್ತು ನಿದ್ದೆಯ ಕೊರತೆ ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು ಎಂದು ಇತ್ತೀಚಿನ ಜಾಗತಿಕ ಸಂಶೋಧನೆಗಳು ಸಾಬೀತುಪಡಿಸಿವೆ.
ತಡವಾಗಿ ತಂದೆಯಾದರೆ ಕಾಡಲಿದೆ ಆಟಿಸಂ ಭೀತಿ!
ಇತ್ತೀಚಿನ ದಿನಗಳಲ್ಲಿ ತಡವಾಗಿ ವಿವಾಹವಾಗುವುದು ಮತ್ತು ತಡ ವಯಸ್ಸಿನಲ್ಲಿ ತಂದೆಯಾಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಅಡ್ವಾನ್ಸ್ಡ್ ಪ್ಯಾಟರ್ನಲ್ ಏಜ್’ (Advanced Paternal Age) ಎಂದು ಕರೆಯಲಾಗುತ್ತದೆ. ಸಂಶೋಧನೆಗಳ ಪ್ರಕಾರ, 45 ವರ್ಷ ದಾಟಿದ ಪುರುಷರಲ್ಲಿ ಜನಿಸುವ ಮಕ್ಕಳಿಗೆ ‘ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್’ (Autism Spectrum Disorder – ಸ್ವಲೀನತೆ) ಮತ್ತು ಇತರ ನರಸಂಬಂಧಿ (Neurodevelopmental) ಸಮಸ್ಯೆಗಳು ಕಾಡುವ ಅಪಾಯ ಹೆಚ್ಚಿರುತ್ತದೆ.
ವಯಸ್ಸಾಗುತ್ತಿದ್ದಂತೆ ಪುರುಷರ ವೀರ್ಯಾಣುಗಳಲ್ಲಿ (Sperm) ಡಿಎನ್ಎ ಮಟ್ಟದ ಸಣ್ಣ ಬದಲಾವಣೆಗಳು ಅಥವಾ ಜೀನ್ಗಳ ರೂಪಾಂತರ (Spontaneous Genetic Mutation) ಸಂಭವಿಸುತ್ತದೆ. ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ‘ಜಾಮಾ ಸೈಕಿಯಾಟ್ರಿ’ (JAMA Psychiatry) ನಿಯತಕಾಲಿಕೆಯಲ್ಲಿ ಪ್ರಕಟವಾದ ಬೃಹತ್ ಅಧ್ಯಯನವೊಂದು ವರದಿ ಮಾಡಿದೆ.
ವೀರ್ಯಾಣುಗಳ ಗುಣಮಟ್ಟ ಕೆಡಿಸುವ ಕೆಟ್ಟ ಹವ್ಯಾಸಗಳು
ಕೇವಲ ವಯಸ್ಸು ಮಾತ್ರವಲ್ಲ, ಗರ್ಭಧಾರಣೆಗೆ ಮುನ್ನ ತಂದೆಯ ಜೀವನಶೈಲಿ ಹೇಗಿರುತ್ತದೆ ಎಂಬುದು ಕೂಡ ಮುಖ್ಯ. ಧೂಮಪಾನ (Smoking) ಮಾಡುವುದರಿಂದ ವೀರ್ಯಾಣುಗಳ ಗುಣಮಟ್ಟ ಗಣನೀಯವಾಗಿ ಕುಸಿಯುತ್ತದೆ ಮತ್ತು ಅವುಗಳ ಡಿಎನ್ಎ ವಿನ್ಯಾಸಕ್ಕೆ ಹಾನಿಯಾಗುತ್ತದೆ. ತಂದೆಯ ವಿಪರೀತ ಮಾನಸಿಕ ಒತ್ತಡ, ಬೊಜ್ಜು (Obesity), ಮದ್ಯಪಾನ, ಅನಿಯಮಿತ ನಿದ್ದೆ ಮತ್ತು ವಾಯುಮಾಲಿನ್ಯದ ಸಂಪರ್ಕವು ‘ಎಪಿಜೆನೆಟಿಕ್ಸ್’ (Epigenetics) ಮೇಲೆ ಪ್ರಭಾವ ಬೀರುತ್ತದೆ. ಅಂದರೆ, ತಂದೆಯ ದೇಹದಲ್ಲಿನ ಕೆಟ್ಟ ಬದಲಾವಣೆಗಳು ಮಗುವಿನ ದೇಹದಲ್ಲಿನ ಜೀನ್ಗಳು ಕಾರ್ಯನಿರ್ವಹಿಸುವ ವಿಧಾನವನ್ನೇ ಬದಲಾಯಿಸಿಬಿಡಬಹುದು ಎಂದು ‘ರಿಪ್ರೊಡಕ್ಟಿವ್ ಬಯಾಲಜಿ ಅಂಡ್ ಎಂಡೋಕ್ರಿನಾಲಜಿ’ ವರದಿ ತಿಳಿಸಿದೆ.
ಪೂರ್ವಸಿದ್ಧತೆ ಇಬ್ಬರಿಗೂ ಅನ್ವಯ
“ಗರ್ಭಧಾರಣೆಗೆ ಮುಂಚಿನ ಆರೋಗ್ಯ (Preconception Health) ಎನ್ನುವುದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ” ಎನ್ನುತ್ತಾರೆ ತಜ್ಞ ವೈದ್ಯರು. ಗುರುಗ್ರಾಮದ ಮದರ್ಹುಡ್ ಆಸ್ಪತ್ರೆಯ ಪ್ರಜನನ ವಿಭಾಗದ ನಿರ್ದೇಶಕಿ ಡಾ. ಮೀನು ಹಂಡಾ ಅವರ ಪ್ರಕಾರ, “ಪುರುಷರ ಪ್ರಜನನ ಸಾಮರ್ಥ್ಯ ಮತ್ತು ಜೀವನಶೈಲಿಯನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಲಾಗಿದೆ. ಆದರೆ, ಹುಟ್ಟಲಿರುವ ಮುಂದಿನ ಪೀಳಿಗೆ ಆರೋಗ್ಯವಾಗಿರಬೇಕಾದರೆ ತಂದೆಯಾಗ ಬಯಸುವವರು ಗರ್ಭಧಾರಣೆಯ ಯೋಜನೆಗೆ ಕನಿಷ್ಠ ಮೂರು ತಿಂಗಳ ಮುಂಚಿತವಾಗಿಯೇ ತಂಬಾಕು, ಮದ್ಯಪಾನದಿಂದ ದೂರವಿರಬೇಕು. ಉತ್ತಮ ನಿದ್ದೆ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಒತ್ತಡ ಮುಕ್ತ ಜೀವನ ನಡೆಸಬೇಕು.”
ತಡ ವಯಸ್ಸಿನಲ್ಲಿ ತಂದೆಯಾಗುವ ಎಲ್ಲರಿಗೂ ಈ ಸಮಸ್ಯೆ ಕಾಡುತ್ತದೆ ಎಂದಲ್ಲ, ಆದರೆ ಅಪಾಯದ ಸಾಧ್ಯತೆಗಳು ಹೆಚ್ಚಿರುತ್ತವೆ ಅಷ್ಟೆ. ಆದ್ದರಿಂದ, ಆರೋಗ್ಯವಂತ ಮಗುವಿನ ಕನಸು ಕಾಣುವ ದಂಪತಿಗಳು ಗರ್ಭಧಾರಣೆಗೆ ಮುನ್ನ ಇಬ್ಬರೂ ಸಮಾನವಾಗಿ ಆರೋಗ್ಯದ ಕಡೆಗೆ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ.