ನಾರ್ವೆ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಪ್ರಶ್ನಿಸಲು ಯತ್ನಿಸಿ ಸುದ್ದಿಯಾಗಿದ್ದ ನಾರ್ವೆಯ ಹಿರಿಯ ಮಹಿಳಾ ಪತ್ರಕರ್ತೆಯ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಮಾರ್ಕ್ ಜುಕರ್‌ಬರ್ಗ್ ಒಡೆತನದ ‘ಮೆಟಾ’ ಸಂಸ್ಥೆ ದಿಢೀರ್ ಆಗಿ ಬ್ಲಾಕ್ ಮಾಡಿದೆ.
ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳು ಬ್ಲಾಕ್ ಆಗಿರುವ ಕುರಿತು ಸ್ವತಃ ಪತ್ರಕರ್ತೆಯೇ ಎಕ್ಸ್ (ಟ್ವಿಟರ್) ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ನಾರ್ವೆಯ ಓಸ್ಲೋ ನಗರದಿಂದ ಪ್ರಕಟವಾಗುವ ‘ಡಾಗ್‌ಸಾವಿಸೆನ್’ ದಿನಪತ್ರಿಕೆಯ ವರದಿಗಾರ್ತಿ ಹೆಲ್ಲೆ ಲಿಂಗ್ ಈ ಆರೋಪ ಮಾಡಿದವರು. ಇತ್ತೀಚೆಗೆ ಓಸ್ಲೋದಲ್ಲಿ ನಡೆದ ಭಾರತ-ನಾರ್ಡಿಕ್ ಶೃಂಗಸಭೆಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮತ್ತು ನಾರ್ವೆ ಪ್ರಧಾನಿ ಜೊತೆಯಾಗಿ ಭಾಗವಹಿಸಿದ್ದರು. ಈ ವೇಳೆ ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಹೆಲ್ಲೆ ಲಿಂಗ್ ಅವರು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಲು ಮುಂದಾಗಿದ್ದರು.
ತಾವು ಮೋದಿಯವರನ್ನು ಪ್ರಶ್ನಿಸಲು ಯತ್ನಿಸಿದ ವಿಡಿಯೋವನ್ನು ಹಂಚಿಕೊಂಡಿದ್ದ ಹೆಲ್ಲೆ, “ವಿಶ್ವದಲ್ಲೇ ಅತ್ಯಂತ ಮುಕ್ತ ಪತ್ರಿಕಾ ಸ್ವಾತಂತ್ರ್ಯ ಹೊಂದಿರುವ ನಾರ್ವೆಯ ಪತ್ರಕರ್ತರ ಪ್ರಶ್ನೆಗಳಿಗೆ ಭಾರತದ ಪ್ರಧಾನಿ ಏಕೆ ಉತ್ತರಿಸುತ್ತಿಲ್ಲ? ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ. ನಮ್ಮೊಂದಿಗೆ ಸಹಕರಿಸುವ ಜಾಗತಿಕ ನಾಯಕರನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ” ಎಂದು ಬರೆದುಕೊಂಡಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಆದರೆ ಈ ವಿಡಿಯೋ ವೈರಲ್ ಆದ ಮರುದಿನವೇ ಅಂದರೆ ಮೇ 19 ರಂದು ಮೆಟಾ ಸಂಸ್ಥೆಯು ಹೆಲ್ಲೆ ಲಿಂಗ್ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಅಮಾನತುಗೊಳಿಸಿದೆ. “ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ, ಅಪೀಲು ಸಲ್ಲಿಸಲು 180 ದಿನಗಳ ಅವಕಾಶವಿದೆ” ಎಂಬ ಸಂದೇಶವಿರುವ ಸ್ಕ್ರೀನ್‌ಶಾಟ್ ಅನ್ನು ಅವರು ಹಂಚಿಕೊಂಡಿದ್ದಾರೆ. ತಮಗೆ ಪ್ರತಿಕ್ರಿಯೆ ನೀಡುತ್ತಿದ್ದ ಸಾವಿರಾರು ಭಾರತೀಯರಿಗೆ ಉತ್ತರಿಸಲು ಈಗ ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮೆಟಾ ಸಂಸ್ಥೆಯು ಈ ಖಾತೆಗಳನ್ನು ಏಕೆ ಅಮಾನತು ಮಾಡಿದೆ ಎಂಬ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಧಾನಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದ ಪತ್ರಕರ್ತೆಯ ಖಾತೆಗಳು ಜಾಲತಾಣದ ನಿಯಮಗಳನ್ನು ಉಲ್ಲಂಘಿಸಿರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ಜಾಲತಾಣಗಳ ಖಾತೆಗಳ ನಿಷೇಧದ ಸುದ್ದಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.