newsics.com/ನ್ಯೂಸಿಕ್ಸ್
ಸಾಮಾನ್ಯ ಜನರ ಅಡುಗೆಮನೆಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಇದರ ಮದ್ಯೆ ಬೆಳಗ್ಗಿನ ಉಪಾಹಾರದ ಪ್ರಮುಖ ಭಾಗವಾಗಿರುವ ‘ಬ್ರೆಡ್’ ದರವೂ ಗಗನಕ್ಕೇರಿದೆ.
ದೇಶದ ಪ್ರಮುಖ ಬ್ರೆಡ್ ಬ್ರ್ಯಾಂಡ್ಗಳು ಪ್ರತಿ ಪ್ಯಾಕೆಟ್ಗೆ ₹5 ರವರೆಗೆ ಭಾರಿ ದರ ಏರಿಕೆ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಬ್ರೆಡ್ ಬೆಲೆಯಲ್ಲಿ ಕಂಡುಬಂದ ಅತಿ ದೊಡ್ಡ ಏರಿಕೆ ಇದಾಗಿದೆ. ಹಾಲಿನ ನಂತರ ಬ್ರೆಡ್ ಕೂಡ ದುಬಾರಿಯಾಗಿರುವುದು ಮಧ್ಯಮ ವರ್ಗದ ಮತ್ತು ದುಡಿಯುವ ವರ್ಗದ ಜನರ ಜೇಬಿಗೆ ನೇರ ಕತ್ತರಿ ಹಾಕಿದಂತಾಗಿದೆ. ಬ್ರೆಡ್ ಬೆಲೆ ದಿಢೀರ್ ಎಂದು ಇಷ್ಟೊಂದು ಹೆಚ್ಚಾಗಲು ಕಾರಣವೇನು? ನಿಮ್ಮ ನಗರದಲ್ಲಿ ಇಂದಿನ ಹೊಸ ದರ ಪಟ್ಟಿ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಾಡರ್ನ್ ಬ್ರೆಡ್ ದರ ಏರಿಕೆ; ಬ್ರಿಟಾನಿಯಾ, ವಿಬ್ಸ್ ಕೂಡ ಸಿದ್ಧತೆ!
ಬ್ರೆಡ್ ಮಾರುಕಟ್ಟೆಯ ದೈತ್ಯ ಕಂಪನಿಗಳಲ್ಲಿ ಒಂದಾದ ‘ಮಾಡರ್ನ್ ಬ್ರೆಡ್’ (Modern Bread) ತನ್ನ ಬೇಸಿಕ್ ಮತ್ತು ಪ್ರೀಮಿಯಂ ಮಾದರಿಯ ಬ್ರೆಡ್ಗಳ ಮೇಲೆ ದಾಖಲೆಯ ₹5 ರಷ್ಟು ಬೆಲೆ ಹೆಚ್ಚಿಸಿದೆ. ವರದಿಯ ಪ್ರಕಾರ, ಮಾಡರ್ನ್ ಬ್ರ್ಯಾಂಡ್ನ ಮೂಲ ಸಂಸ್ಥೆಯಾದ ‘ಗ್ರೂಪೋ ಬಿಂಬೋ’ ಕೈಗೊಂಡ ಈ ನಿರ್ಧಾರದ ಬೆನ್ನಲ್ಲೇ, ‘ಬ್ರಿಟಾನಿಯಾ’ (Britannia) ಮತ್ತು ‘ವಿಬ್ಸ್’ (Wibs) ನಂತಹ ಇತರ ಪ್ರಮುಖ ಬ್ರ್ಯಾಂಡ್ಗಳು ಕೂಡ ಶೀಘ್ರದಲ್ಲೇ ಬೆಲೆ ಏರಿಕೆ ಮಾಡಲು ಸಜ್ಜಾಗಿವೆ. ಅಂದರೆ ಮುಂದಿನ ದಿನಗಳಲ್ಲಿ ಇಡೀ ಬ್ರೆಡ್ ಮಾರುಕಟ್ಟೆಯೇ ದುಬಾರಿಯಾಗಲಿದೆ.
ಬ್ರೆಡ್ ಬೆಲೆ ಏರಿಕೆಗೆ 3 ಪ್ರಮುಖ ಕಾರಣಗಳು
ಸಾಮಾನ್ಯವಾಗಿ ಬ್ರೆಡ್ ಬೆಲೆ ₹2 ಅಥವಾ ₹3 ರಷ್ಟು ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ನೇರವಾಗಿ ₹5 ಹೆಚ್ಚಳವಾಗಲು ಜಾಗತಿಕ ಮತ್ತು ದೇಶೀಯ ಮಟ್ಟದ ಕೆಲವು ಪ್ರಮುಖ ಕಾರಣಗಳಿವೆ:
ಪ್ಲಾಸ್ಟಿಕ್ ಪ್ಯಾಕೇಜಿಂಗ್ ದುಬಾರಿ: ಬ್ರೆಡ್ ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಬ್ಯಾಗ್ಗಳ ಕಚ್ಚಾ ವಸ್ತುವನ್ನು (ಪ್ಲಾಸ್ಟಿಕ್ ಪೌಡರ್) ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತ ಮತ್ತು ಮಧ್ಯಪ್ರಾಚ್ಯದಲ್ಲಿ (Middle East) ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಪ್ಲಾಸ್ಟಿಕ್ ಬೆಲೆ ದಾಖಲೆ ಮಟ್ಟಕ್ಕೆ ಏರಿದೆ ಎಂದು ಬೇಕರಿ ಮಾಲೀಕರು ಹೇಳಿದ್ದಾರೆ.
ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚ: ಡೀಸೆಲ್ ಬೆಲೆ ಏರಿಕೆ ಮತ್ತು ಸಪ್ಲೈ ಚೈನ್ನಲ್ಲಿನ ಅಡಚಣೆಗಳಿಂದಾಗಿ ಬೇಕರಿಯಿಂದ ಅಂಗಡಿಗಳಿಗೆ ಬ್ರೆಡ್ ತಲುಪಿಸುವ ಸಾರಿಗೆ ವೆಚ್ಚ (Transportation Cost) ಗಣನೀಯವಾಗಿ ಹೆಚ್ಚಾಗಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆ: ಬ್ರೆಡ್ ತಯಾರಿಕೆಯಲ್ಲಿ ಬಳಸುವ ಪ್ರಿಸರ್ವೇಟಿವ್ಸ್, ಯೀಸ್ಟ್, ಉಪ್ಪು ಮತ್ತು ಗ್ಯಾಸ್ ಬೆಲೆಗಳು ಸಹ ಮುಂಚಿಗಿಂತ ಹೆಚ್ಚಾಗಿದ್ದು, ಬೇಕರಿ ನಡೆಸುವುದು ಕಷ್ಟಕರವಾಗಿದೆ.
ಬಿಸ್ಕತ್ ಮೇಲೂ ಬೆಲೆ ಏರಿಕೆ ಭೀತಿ!
ಮೇ 14 ರಂದಷ್ಟೇ ಅಮುಲ್ ಸೇರಿದಂತೆ ದೇಶದ ಪ್ರಮುಖ ಡೈರಿ ಕಂಪನಿಗಳು ಹಾಲಿನ ದರವನ್ನು ಪ್ರತಿ ಲೀಟರ್ಗೆ ₹2 ರಷ್ಟು ಹೆಚ್ಚಿಸಿದ್ದವು. ಹಾಲು ಮತ್ತು ಬ್ರೆಡ್ ಎರಡೂ ದೈನಂದಿನ ಉಪಾಹಾರದ ಮುಖ್ಯ ಭಾಗವಾಗಿರುವುದರಿಂದ ಗ್ರಾಹಕರಿಗೆ ಇದು ದೊಡ್ಡ ಹೊಡೆತವಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಈ ಬೆಲೆ ಏರಿಕೆ ಇಲ್ಲಿಗೆ ನಿಲ್ಲುವುದಿಲ್ಲ. ಇನ್ಪುಟ್ ವೆಚ್ಚ ಹೆಚ್ಚಾಗಿರುವುದರಿಂದ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಸ್ಕತ್ಗಳ ಬೆಲೆಯೂ ಹೆಚ್ಚಾಗಬಹುದು. ಹಾಲು, ಎಣ್ಣೆ, ಮಸಾಲೆ, ತರಕಾರಿ ಮತ್ತು ಈಗ ಬೇಕರಿ ಉತ್ಪನ್ನಗಳೂ ದುಬಾರಿಯಾಗುತ್ತಿರುವುದರಿಂದ ಮನೆ ನಡೆಸುವುದು ಹೇಗೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.