newsics.com/ನ್ಯೂಸಿಕ್ಸ್
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಮಂಗಳವಾರ ಸಂಜೆ ಭೇಟಿ ಮಾಡಿ, ಕೆಲಕಾಲ ಮಾತುಕತೆ ನಡೆಸಿದರು.
ಪುತ್ರನನ್ನು ಕಂಡು ದರ್ಶನ್ ಭಾವುಕರಾದರು. ಮನೆಯಿಂದ ತಂದಿದ್ದ ಹಣ್ಣುಗಳನ್ನು ದರ್ಶನ್‌ಗೆ ಪತ್ನಿ ನೀಡಿದರು.
“ದರ್ಶನ್ ಅವರನ್ನು ಮದುವೆಯಾಗಿ ಮೇ 19ಕ್ಕೆ 23 ವರ್ಷ ತುಂಬಲಿದೆ. ಹೀಗಾಗಿ, ಅವರನ್ನು ಹತ್ತಿರದಿಂದ ಭೇಟಿಗೆ ಅವಕಾಶ ಕಲ್ಪಿಸಿ’ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್‌ಗೆ ವಿಜಯಲಕ್ಷ್ಮಿ ಪತ್ರ ಬರೆದಿದ್ದರು. ಆ ಪತ್ರವನ್ನು ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್‌ಗೆ ಡಿಜಿಪಿ ಕಳುಹಿಸಿ, ನಿಯಮಾವಳಿಯಂತೆ ಕ್ರಮಕ್ಕೆ ಸೂಚಿಸಿದ್ದರು.
“ಜೈಲಿನ ಕೈಪಿಡಿಯಂತೆ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ದರ್ಶನ್ ಅವರು ಪತ್ನಿ ಹಾಗೂ ಪುತ್ರನ ಜತೆಗೆ ಕೆಲ ಸಮಯ ಮಾತುಕತೆ ನಡೆಸಿದರು. ವಿಜಯಲಕ್ಷ್ಮಿ ಅವರು ದರ್ಶನ್‌ಗೆ ಧೈರ್ಯ ಹೇಳಿ ಹೊರಟರು’ ಎಂದು ಮೂಲಗಳು ಹೇಳಿವೆ.
ವಾರ್ಷಿಕೋತ್ಸವವಿದ್ದು, ಪತ್ನಿ ಮತ್ತು ಪುತ್ರನ ಭೇಟಿಗೆ ಅವಕಾಶ ನೀಡಬೇಕು. ಕುಟುಂಬಸ್ಥರು ಭೇಟಿಗೆ ಬಂದರೂ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಜೈಲಿನಲ್ಲಿರುವ ಕಬ್ಬಿಣದ ಗ್ರಿಲ್ ಅಡ್ಡ ಬರುತ್ತಿದೆ. ಆದ್ದರಿಂದ ಈ ಬಾರಿ ಕೊಠಡಿ ಒಳಗೆ ಮಾತುಕತೆ ಮತ್ತು ಭೇಟಿಗೆ ಅವಕಾಶ ಮಾಡಿಕೊಡಿ’ ಎಂದು ದರ್ಶನ್ ಅವರೂ ಜೈಲಿನ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.
2024ರ ಜೂನ್ 8ರಂದು ರೇಣುಕಸ್ವಾಮಿ ಅವರ ಕೊಲೆ ನಡೆದಿತ್ತು. ಆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗೌಡ ಸೇರಿದಂತೆ ಹಲವರನ್ನು ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದರು. ಅದಾದ ಮೇಲೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ದರ್ಶನ್ ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದರು. ಉಳಿದವರೂ ಸಹ ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಂದ ಬಿಡುಗಡೆ ಆಗಿದ್ದರು. ನಂತರ, ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರಿಂ ಕೋರ್ಟ್‌ನಲ್ಲಿ ಬೆಂಗಳೂರು ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು.
ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಅದರ ಬೆನ್ನಲ್ಲೇ ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿ ಏಳು ಮಂದಿಯನ್ನು ನಗರ ಪೊಲೀಸರು ಬಂಧಿಸಿದ್ದರು.
‘ಈ ಬೆಳವಣಿಗೆಯ ಬಳಿಕ ದರ್ಶನ್ ಅವರನ್ನು ಭೇಟಿ ಮಾಡಲು ಕುಟುಂಬಸ್ಥರಿಗೆ ಪದೇ ಪದೇ ಅವಕಾಶ ಲಭಿಸುತ್ತಿಲ್ಲ. ಜೈಲಿನ ನಿಯಮಾವಳಿ ಪ್ರಕಾರವೇ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ಜೈಲಿನ ಮೂಲಗಳು ತಿಳಿಸಿವೆ.