ಮಂಗಳೂರಿನ ಕಾವೂರು ಭಾಗದ ಏರ್‌ಪೋರ್ಟ್ ರಸ್ತೆ ಬದಿ ಬಲಿಪಗುರಿ ಪ್ರದೇಶದ ಕೆಲವು ಬಾವಿಗಳಲ್ಲಿ ಡೀಸೆಲ್ ಅಂಶ ಪತ್ತೆಯಾಗಿದೆ. ನೀರು ದಟ್ಟ ಡೀಸೆಲ್ ವಾಸನೆಯಿಂದ ಕೂಡಿದ್ದು, ಕುಡಿಯಲು ಅಸಾಧ್ಯವಾಗಿದೆ.
65 ವರ್ಷಗಳ ಬಾವಿಯಲ್ಲಿ ಸಮಸ್ಯೆ ಉಲ್ಬಣ: ಬಲಿಪಗುರಿಯ ಲೀಲಾವತಿ ಎಂಬವರ ಮನೆಯ ಬಾವಿಗೆ 65 ವರ್ಷಗಳಾಗಿದೆ. ಇಲ್ಲಿಯವರೆಗೆ ಯಾವ ತೊಂದರೆಯೂ ಆಗಿರಲಿಲ್ಲ. ಆದರೆ ಕಳೆದ ನವೆಂಬರ್‌ನಿಂದ ಇಂತಹ ಸಮಸ್ಯೆಗಳಾಗಿದೆ. ಎರಡು ಸಲ 18ಸಾವಿರ ರೂ. ಖರ್ಚು ಮಾಡಿ ನೀರನ್ನು ಸಂಪೂರ್ಣ ಖಾಲಿ ಮಾಡಿ, ಶುಚಿಗೊಳಿಸಲಾಗಿತ್ತು. ಆದರೂ ಮತ್ತೆ ಅದೇ ಸಮಸ್ಯೆ ಉಂಟಾಗಿದೆ. ಈ ಬಾವಿಯ ನೀರನ್ನು ಇವರ ಕುಟುಂಬ ಮಾತ್ರವಲ್ಲದೇ, ಸುತ್ತಮುತ್ತಲಿನ ಕೆಲವು ಮನೆಯವರು ಈ ಬಾವಿಯ ನೀರನ್ನು ಅವಲಂಬಿಸುತ್ತಾರೆ. ಆದರೆ, ಇದೀಗ ಬಾವಿಯ ನೀರನ್ನೇ ಕುಡಿಯಲಾಗುತ್ತಿಲ್ಲ.
ಬಾವಿ ನೀರಿನಲ್ಲಿ ಡೀಸೆಲ್ ಅಂಶ ಪತ್ತೆ: ಅದೇ ರೀತಿ ಸದಾಶಿವ ಎಂಬವರು 2022ರಲ್ಲಿ ಮನೆಕಟ್ಟಿದ್ದು, ಅಲ್ಲಿಂದ ಇಲ್ಲಿವರೆಗೆ ಯಾವ ತೊಂದರೆಯೂ ಇರಲಿಲ್ಲ. ಆದರೆ, ವಾರದ ಹಿಂದಿನಿಂದ ಅವರ ಬಾವಿಯ ನೀರಿನಲ್ಲೂ ಡೀಸೆಲ್ ಅಂಶ ಪತ್ತೆಯಾಗಿದೆ. ಕುಡಿಯಲು ಅಸಾಧ್ಯವಾಗಿದೆ. ಇವರ ಬಾವಿಯ ನೀರಿನಲ್ಲಿ ಮುಳುಗಿಸಿ ಬೆಂಕಿ ಹತ್ತಿಸಿದರೂ ಕಾಗದ ಹೊತ್ತಿ ಉರಿಯುತ್ತದೆ. ಅದೇ ರೀತಿ ರಮೇಶ್ ಶೆಟ್ಟಿ ಎಂಬವರ ಬಾವಿಯ ನೀರಿನಲ್ಲೂ ಡೀಸೆಲ್ ಅಂಶ ಪತ್ತೆಯಾಗಿದೆ.
ಬಾವಿಯಿಂದ ನೀರು ಸೇದಿದ ವೇಳೆಯೂ ಡೀಸೇಲ್ ವಾಸನೆಯ ನೀರು ಸಿಗುತ್ತಿದೆ ಎಂದು ಸ್ಥಳೀಯರಾದ ಲೀಲಾವತಿ ಅವರು ಅಳಲು ತೋಡಿಕೊಂಡರು. ಅಲ್ಲೇ ಮೇಲೆ ರಸ್ತೆ ಬದಿಯಿರುವ ಪೆಟ್ರೋಲ್ ಬಂಕ್‌ನ ಸೋರಿಕೆಯೇ ಎಂದು ವಿಚಾರಿಸಿದಾಗ ಪೆಟ್ರೋಲ್ ಬಂಕ್‌ನವರು ನಮ್ಮಲ್ಲಿ ಯಾವ ಸೋರಿಕೆಯೂ ಆಗುತ್ತಿಲ್ಲ. ಸೋರಿಕೆ ಆದಲ್ಲಿ ನಮಗೆ ಡೀಸೆಲ್ ಶಾರ್ಟೇಜ್ ಆಗುತ್ತಿತ್ತು. ಅಂತಹ ಯಾವ ಸಮಸ್ಯೆಯೂ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಡಿಸೇಲ್ ಅಂಶ ಹೇಗೆ ಪತ್ತೆ ಆಗುತ್ತಿದೆ ಎಂಬುದೇ ತಿಳಿದು ಬರುತ್ತಿಲ್ಲ. ಆದರೆ ನೀರನ್ನು ತಪಾಸಣೆ ಮಾಡಿದಾಗ ಈ ಬಾವಿಗಳ ನೀರಿನಲ್ಲಿ ಶೇ.27 ಡೀಸೆಲ್ ಅಂಶ ಪತ್ತೆಯಾಗಿದೆ. ಜೊತೆಗೆ ತೈಲದೊಂದಿಗೆ ಗ್ರೀಸ್ ಅಂಶ ಪತ್ತೆಯಾಗಿರುವುದು ವರದಿಯಲ್ಲಿ ತಿಳಿದು ಬಂದಿದೆ.
ಕಾವೂರಿನ ಮೂರು ಮನೆಗಳ ಬಾವಿಗಳಲ್ಲಿ ಡೀಸೇಲ್ ಅಂಶ ಪತ್ತೆಯಾಗಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿದೆ. ಕೆಪಿಟಿಸಿಎಲ್ ಸಬ್ಸ್ಟೇಶನ್ ಮುಂಭಾಗದಲ್ಲಿರುವ ಮೂರು ಮನೆಗಳಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ಈ ಕುರಿತು ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ಇಲಾಖೆಗೆ ದೂರು ನೀಡಿದ್ದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಡಿಎಚ್ಒ ಕಚೇರಿಯಿಂದ ಕುಳೂರು ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಕಳುಹಿಸಿ ಬಾವಿಗಳ ನೀರಿನ ಮಾದರಿ ಸಂಗ್ರಹಿಸಲಾಗಿದೆ. ಪರಿಶೀಲನೆ ನಡೆಸಿದ ವೇಳೆ ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಇದನ್ನು ಮಹಾನಗರಪಾಲಿಕೆಗೆ ನೀಡಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಸಮಸ್ಯೆಯ ಮೂಲ ಯಾವುದು ಎಂಬುದೇ ಯಕ್ಷಪ್ರಶ್ನೆಯಾಗಿದೆ. ತಕ್ಷಣ ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇಡೀ ಜಗತ್ತೇ ಎದುರಾದ್ರೂ ನಾನು ನಿನ್ನ ಬಿಡಲ್ಲ: ನಟ ದರ್ಶನ ಪತ್ನಿ ವಿಜಯಲಕ್ಷ್ಮೀ ಪೋಸ್ಟ್