newsics.com/ನ್ಯೂಸಿಕ್ಸ್
ಹೈದರಾಬಾದ್: ಪೋಕ್ಸೊ ಪ್ರಕರಣದಲ್ಲಿ ಬಂಡಿ ಸಂಜಯ್ ಅವರ ಪುತ್ರನನ್ನು ಬಂಧಿಸಲಾಗಿದೆ.
https://youtube.com/shorts/qM17NYCF6QQ?si=P9kdXfY-X5l0cveO
ಸಂತ್ರಸ್ತ ಮಹಿಳೆ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ದಾಖಲಿಸಿಕೊಂಡ ನಂತರ ದೇಶ ಬಿಟ್ಟು ಹೋಗದಂತೆ ತಡೆಯಲು ಸೈಬರಾಬಾದ್ ಪೊಲೀಸರು ಲುಕ್-ಔಟ್ ಸುತ್ತೋಲೆ ಹೊರಡಿಸಿದ ನಂತರ, ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಭಾಗೀರಥ್ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪೊಲೀಸರ ಮುಂದೆ ಶರಣಾಗಿದ್ದಾನೆ.
ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಹೇಳಿಕೆಯಲ್ಲಿ, ಕಾನೂನಿನ ಮೇಲಿನ ಗೌರವ ಮತ್ತು ನಡೆಯುತ್ತಿರುವ ತನಿಖೆಯಿಂದಾಗಿ ತಮ್ಮ ಮಗನನ್ನು ವಕೀಲರ ಮೂಲಕ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, ನನ್ನ ಮಗನ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ, ಕಾನೂನಿನ ಮೇಲಿನ ಗೌರವದಿಂದಾಗಿ ನಾನು ನನ್ನ ಪುತ್ರ ಭಗೀರಥ್‌ನನ್ನು ತನಿಖೆಗಾಗಿ ವಕೀಲರ ಮೂಲಕ ಪೊಲೀಸರಿಗೆ ಒಪ್ಪಿಸಿದ್ದೇನೆ. ಕಾನೂನಿನ ಮುಂದೆ ನನ್ನ ಮಗನಾಗಲಿ ಅಥವಾ ಒಬ್ಬ ಸಾಮಾನ್ಯ ನಾಗರಿಕನಾಗಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಲೇಬೇಕು, ಎಂದು ಹೇಳಿದ್ದಾರೆ.
ಬಂಧನದಿಂದ ತಪ್ಪಿಸಿಕೊಳ್ಳಲು ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಭಗೀರಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್, ಶುಕ್ರವಾರ ರಾತ್ರಿ ಆತನಿಗೆ ಯಾವುದೇ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದೆ.
ಮೇ 8 ರಂದು 17 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಸೈಬರಾಬಾದ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಭಗೀರಥ್ ತಮ್ಮ ಮಗಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪರಿಚಯಸ್ಥರ ಮೂಲಕ ಜೂನ್ 2025 ರ ಸುಮಾರಿಗೆ ಇವರಿಬ್ಬರ ಮಧ್ಯೆ ಪರಿಚಯವಾಗಿದ್ದು, ನಂತರ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಸಂಪರ್ಕ ಮುಂದುವರಿದಿತ್ತು. ಬಾಲಕಿಗೆ 18 ವರ್ಷ ತುಂಬಿದ ನಂತರ ಮದುವೆಯಾಗುವುದಾಗಿ ನಂಬಿಸಿ ಭಗೀರಥ್ ಆಕೆಯ ಮೇಲೆ ಮಾನಸಿಕ ಒತ್ತಡ ಹೇರಿದ್ದ ಎನ್ನಲಾಗಿದೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡ ನಂತರ ಪೊಲೀಸರು ಮತ್ತಷ್ಟು ಕಠಿಣ ಪೋಕ್ಸೋ ಸೆಕ್ಷನ್‌ಗಳನ್ನು ಪ್ರಕರಣಕ್ಕೆ ಸೇರಿಸಿದ್ದಾರೆ.