newsics.com/ನ್ಯೂಸಿಕ್ಸ್
ಚಿತ್ರದುರ್ಗ: ಮದುವೆ ಆಗುವುದಾಗಿ ಆಮಿಷವೊಡ್ಡಿ ನಂಬಿಸಿ ಲೈಂಗಿಕವಾಗಿ ಶೋಷಿಸಿ, ಗರ್ಭಿಣಿಯಾದಾಗ ಗರ್ಭಪಾತದ ಮಾತ್ರೆ ನೀಡಿ ವಂಚಿಸಿದ ಆರೋಪದ ಮೇಲೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ವಿಭಾಗದ ರಿಸರ್ವ್ ಸಬ್-ಇನ್ಸ್‌ಪೆಕ್ಟರ್ ವಿರುದ್ಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
https://youtube.com/shorts/qM17NYCF6QQ?si=P9kdXfY-X5l0cveO
ಆರೋಪಿ ಪೊಲೀಸ್ ಅಧಿಕಾರಿಯನ್ನು ಡಿಎಆರ್ ವಿಭಾಗದ ಆರ್‌ಎಸ್‌ಐ ವರುಣ್ ಕುಮಾರ್ ಎಂದು ಗುರುತಿಸಲಾಗಿದೆ.
ಮೂಲತಃ ದಾವಣಗೆರೆಯವರಾದ ಸಂತ್ರಸ್ತೆ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಆರ್‌ಎಸ್‌ಐ ವರುಣ್ ಕುಮಾರ್ ಪರಿಚಯವಾಗಿತ್ತು. ಆ ಸಮಯದಲ್ಲಿ ವರುಣ್ ಕುಮಾರ್ ಪೊಲೀಸ್ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದರು. ಪರಿಚಯ ಹತ್ತಿರವಾಗಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ.
ದೂರಿನ ಪ್ರಕಾರ, ವರುಣ್ ಕುಮಾರ್ ಯುವತಿಯನ್ನು ಮದುವೆಯಾಗುವುದಾಗಿ ನಿರಂತರವಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಈ ಮಧ್ಯೆ ಯುವತಿ ಗರ್ಭಿಣಿಯಾಗಿದ್ದರು. ವಿಷಯ ತಿಳಿದು ತಕ್ಷಣ ಮದುವೆಯಾಗುವಂತೆ ಯುವತಿ ಒತ್ತಾಯಿಸಿದಾಗ, ಆರೋಪಿ ವರುಣ್ ಕುಮಾರ್ ಮದುವೆಯಾಗುವ ಬದಲು ಆಕೆಗೆ ಬಲವಂತವಾಗಿ ಗರ್ಭಪಾತದ ಮಾತ್ರೆಗಳನ್ನು ನೀಡಿದ್ದಾರೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಆರ್‌ಎಸ್‌ಐ ವರುಣ್ ಕುಮಾರ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.