newsics.com/ನ್ಯೂಸಿಕ್ಸ್
ಭಾರತದ ಯಾವುದೇ ನಗರಕ್ಕೆ ಹೋದರೂ ವಾಹನ ಸವಾರರನ್ನು ಕಾಡುವ ಮೊದಲ ಸಮಸ್ಯೆ ಎಂದರೆ ಅದು ಟ್ರಾಫಿಕ್ ಸಿಗ್ನಲ್‌ಗಳು. ಸಿಗ್ನಲ್ ಬಿದ್ದಾಗ ನಿಮಿಷಗಟ್ಟಲೆ ಕಾಯುವುದು, ಹಾರ್ನ್ ಸದ್ದು ಹಾಗೂ ಟ್ರಾಫಿಕ್ ಜಾಮ್ ಕಿರಿಕಿರಿ ಸಾಮಾನ್ಯ. ಆದರೆ, ಭಾರತದಲ್ಲೇ ಒಂದು ನಗರವಿದೆ, ಅಲ್ಲಿ ನೀವು ಎಷ್ಟೇ ದೂರ ಪ್ರಯಾಣಿಸಿದರೂ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ನಿಮಗೆ ಎದುರಾಗುವುದಿಲ್ಲ! ಹೌದು, ರಾಜಸ್ಥಾನದ ಕೋಟಾ ನಗರ ಇಂದು ದೇಶದ ಮೊದಲ ‘ಸಿಗ್ನಲ್ ಮುಕ್ತ’ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
https://youtube.com/shorts/vd_Fn8drod4?si=CvPPZAJu5QmGONhu
ಕೋಟಾ ನಗರದಲ್ಲಿ ಸಿಗ್ನಲ್‌ಗಳ ಬದಲು ಅತ್ಯಾಧುನಿಕ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ. ನಗರದಾದ್ಯಂತ ನಿರ್ಮಿಸಲಾಗಿರುವ ಮೇಲ್ಸೇತುವೆಗಳು , ಅಂಡರ್‌ಪಾಸ್‌ಗಳು ಮತ್ತು ಸುಸಜ್ಜಿತ ಸರ್ಕಲ್‌ಗಳು ವಾಹನಗಳು ಎಲ್ಲಿಯೂ ನಿಲ್ಲದಂತೆ ನೋಡಿಕೊಳ್ಳುತ್ತವೆ. ವಾಹನಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವಾಗ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ರಸ್ತೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಅನಿವಾರ್ಯವಿರುವ ಕಡೆಗಳಲ್ಲಿ ರಸ್ತೆಗಳನ್ನು ವಿಸ್ತರಿಸಲಾಗಿದ್ದು, ವಾಹನ ಸವಾರರು ಸ್ವಯಂ ಶಿಸ್ತಿನಿಂದ ಸಂಚರಿಸುತ್ತಾರೆ.
ಥಿಂಪುನಲ್ಲಿ ಟ್ರಾಫಿಕ್ ಡಾನ್ಸ್!
ವಿಶ್ವದ ಟ್ರಾಫಿಕ್ ಲೈಟ್‌ಗಳಿಲ್ಲದ ಮೊಟ್ಟಮೊದಲ ರಾಜಧಾನಿ ಭೂತಾನ್‌ನ ಥಿಂಪು. ಇಲ್ಲಿ ಸಿಗ್ನಲ್‌ಗಳ ಬದಲಾಗಿ ಪೊಲೀಸರು ಕೈ ಸಜ್ಞೆಯ ಮೂಲಕ ಟ್ರಾಫಿಕ್ ಅನ್ನು ನಿಯಂತ್ರಿಸುತ್ತಾರೆ. ಇದು ಒಂದು ಕಲಾತ್ಮಕ ನೃತ್ಯದಂತೆ ಕಾಣುವುದು ವಿಶೇಷ.
ಕೋಟಾ ಅರ್ಬನ್ ಇಂಪ್ರೂವ್‌ಮೆಂಟ್ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ವ್ಯವಸ್ಥಿತವಾಗಿ ಮಾಡಿದ ಬದಲಾವಣೆಗಳೇ ಇದಕ್ಕೆ ಕಾರಣ. ಹಿಂದೆ ಟ್ರಾಫಿಕ್ ಹೆಚ್ಚಿದ್ದ ಏರ್‌ಪೋರ್ಟ್ ಜಂಕ್ಷನ್, ಅನಂತಪುರ ಜಂಕ್ಷನ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಸಿಗ್ನಲ್‌ಗಳನ್ನು ತೆಗೆದುಹಾಕಿ, ಅವುಗಳ ಬದಲಿಗೆ ‘ರೌಂಡ್ ಅಬೌಟ್’ (ವೃತ್ತಗಳು) ಮತ್ತು ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಯಿತು. ವಾಹನಗಳ ವೇಗ ಕಡಿಮೆಯಾಗದಂತೆ ರಸ್ತೆಗಳನ್ನು ವಿಸ್ತರಿಸಲಾಯಿತು. ಫ್ಲೈಓವರ್‌ಗಳು ಮತ್ತು ಸರ್ವಿಸ್ ರಸ್ತೆಗಳ ಮೂಲಕ ವಾಹನಗಳು ಎಲ್ಲೂ ನಿಲ್ಲುವ ಅಗತ್ಯವಿಲ್ಲದಂತೆ ನಿರಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು.
ಕೋಟಾ ಮತ್ತು ಥಿಂಪು ನಗರಗಳು ತೋರಿಸುತ್ತಿರುವ ಈ ಹಾದಿ ಭವಿಷ್ಯದಲ್ಲಿ ಇತರ ನಗರಗಳಿಗೂ ಮಾದರಿಯಾಗುವ ಸಾಧ್ಯತೆಯಿದೆ.