newsics.com/ನ್ಯೂಸಿಕ್ಸ್
ಮಡಿಕೇರಿ: ಆನೆ ಮಾನವ ಸಂಘರ್ಷ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದನ್ನು ಹಾಗೂ ಸಿ ಅಂಡ್ ಡಿ ಲ್ಯಾಂಡ್ ಸಮಸ್ಯೆ ಬಗೆಹರಿಸದಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಅರಣ್ಯ ಸಚಿವರ ವಾಹನ ತಡೆದು ಪ್ರತಿಭಟಿಸಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಕೊಡಗಿನ ಪ್ರವಾಸಿ ತಾಣಗಳಲ್ಲೊಂದಾದ ದುಬಾರೆ ಅನೆ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಬುಧವಾರ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಜಿಲ್ಲೆಗೆ ಆಗಮಿಸಿದ್ದರು.
ಈ ನಡುವೆ ಕುಶಾಲನಗರದಿಂದ ದುಬಾರೆಗೆ ತೆರಳುವ ಮಾರ್ಗದ ಗುಡ್ಡೆಹೊಸೂರಿನಲ್ಲಿ ಸಚಿವರ ವಾಹನ ತಡೆದು ಘೇರಾವ್ ಹಾಕಲು ಸೋಮವಾರಪೇಟೆ ಮಂಡಲ ಬಿಜೆಪಿ ಮುಂದಾಗಿತ್ತು.
ಆದರೆ ಪ್ರತಿಭಟನೆಯ ಸುಳಿವರಿತು ಸನ್ನದ್ಧರಾಗಿದ್ದ ಪೊಲೀಸರು, ಸಚಿವರಿಗೆ ಘೇರಾವ್ ಹಾಕಲು ಸಿದ್ದತೆ ನಡೆಸಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಕೊಡಗು ಕಾಂಗ್ರೆಸ್ ಖಂಡನೆ: ಶಾಶ್ವತ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲು ಬಂದ ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಕಾರನ್ನು ತಡೆಯಲು ಬಿಜೆಪಿ ಮುಖಂಡರು ಮುಂದಾಗಿರುವುದನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ವಕ್ತಾರ ತೆನ್ನಿರ ಮೈನಾ ಅವರು, ಸುಮಾರು 120 ಆದಿವಾಸಿಗಳ ಜೀವನಕ್ಕೆ ಮತ್ತು ಬದುಕಿಗೆ ಆಶ್ರಯವಾಗುವಂತಹ ತೂಗುಸೇತುವೆ ನಿರ್ಮಾಣಕ್ಕೆ ಶಾಸಕ ಡಾ ಮಂಥರ್ ಗೌಡ ಅವರ ಕೋರಿಕೆ ಮೇರೆಗೆ 7.50 ಕೋಟಿ ರೂ.ಗಳ ಅನುದಾನವನ್ನು ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಒದಗಿಸಿದ್ದಾರೆ.
ಕೊಡಗಿನ ಜನರ ಮೇಲಿನ ಅಭಿಮಾನದಿಂದ ಇಂದು ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ
ಸಚಿವರ ಕಾರನ್ನು ತಡೆಯಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ತಮ್ಮ ಪಕ್ಷದ ಸರ್ಕಾರ ಮತ್ತು ಶಾಸಕರಿಂದ 25 ವರ್ಷಗಳಿಂದ ಆಗದ ಕೆಲಸವನ್ನು ಡಾ ಮಂಥರ್ ಗೌಡ ಅವರು ಮಾಡಿದ್ದಾರೆ ಎಂಬ ಏಕೈಕ ಕಾರಣದಿಂದ ಹತಾಶರಾಗಿ ಬಿಜೆಪಿ ಮುಖಂಡರು ಈ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಹಿಂದಿನ ಅವಧಿಯಲ್ಲಿ ಆಗಿನ ಶಾಸಕರಿಗೆ ಯಾವುದೇ ವಿಶೇಷ ಅನುದಾನ ತರಲು ಸಾಧ್ಯವಾಗಿರಲಿಲ್ಲ.ಈಗ ಜಿಲ್ಲೆಯ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂಥರ್ ಗೌಡರವರು ಹೆಚ್ಚಿನ ಆಸಕ್ತಿಯಿಂದ ಎಲ್ಲಾ ಇಲಾಖೆಗಳಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ಇದರಿಂದ ಮುಂದೆ ತಮಗೆ ಮುಂದೆ ರಾಜಕೀಯ ಭವಿಷ್ಯ ಇಲ್ಲ ಎಂಬ ಭಯದಿಂದ ಮಾಜಿ ಶಾಸಕದ್ವಯರು ತಮ್ಮ ಹಿಂಬಾಲಕರಿಂದ ಕೊಡಗಿನ ಜನತೆ ತಲೆತಗ್ಗಿಸುವ ಈ ಕೃತ್ಯವನ್ನು ಮಾಡಿಸಿದ್ದಾರೆ ಎಂದು ತೆನ್ನಿರ ಮೈನಾ ಆರೋಪಿಸಿದ್ದಾರೆ.
ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ಅನೇಕ ದಶಕಗಳಿಂದ ಇದೆ. ಜಿಲ್ಲೆಯಲ್ಲಿ ಕಳೆದ 25 ವರ್ಷಗಳಲ್ಲಿ ಬಿಜೆಪಿ ಶಾಸಕರಿದ್ದಾಗ ಅರಣ್ಯ ಇಲಾಖೆ ಏನು ಕೆಲಸ ಮಾಡಿದೆ ಎಂದು ನೋಡದೇ ಇದ್ದು, ಈಗಿನ ಶಾಸಕರು ಕಾಳಜಿಯಿಂದ ವನ್ಯಜೀವಿ ಸಂಘರ್ಷ ತಡೆದ ವೈಜ್ಞಾನಿಕವಾಗಿ ಕ್ರಮಕೈಗೊಳ್ಳಲು ಮುಂದಾಗಿರುವಾಗ ಅವರಿಗೆ ಪ್ರೋತ್ಸಾಹ ನೀಡುವ ಬದಲಿಗೆ ರಾಜಕಾರಣಕ್ಕಾಗಿ ಬಿಜೆಪಿಯವರು ತಡೆ ಮಾಡುತ್ತಿದ್ದಾರೆ.ಇಂತಹ ಗೊಡ್ಡು ಬೆದರಿಕೆಗಳಿಗೆ ಕೊಡಗು ಕಾಂಗ್ರೆಸ್ ಜಗ್ಗುವುದಿಲ್ಲ ಎಂದು ತೆನ್ನಿರ ಮೈನಾ ಹೇಳಿದ್ದಾರೆ.