newsics.com/ನ್ಯೂಸಿಕ್ಸ್
ನವದೆಹಲಿ: ಭಾರತದ ಜನಜೀವನ, ಸಂಸ್ಕೃತಿ ಮತ್ತು ಇತಿಹಾಸದ ಮಹತ್ವದ ಕ್ಷಣಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಅಮರವಾಗಿಸಿದ ವಿಶ್ವವಿಖ್ಯಾತ ಫೋಟೋ ಜರ್ನಲಿಸ್ಟ್ ರಘು ರೈ (83) ಅವರು ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನವದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
1984ರ ಬೋಪಾಲ್ ಅನಿಲ ದುರಂತದ ಭೀಕರತೆಯನ್ನು ಜಗತ್ತಿಗೆ ಪರಿಚಯಿಸಿದ ಅವರ ಭಾವಚಿತ್ರಗಳು ಇಂದಿಗೂ ಮೈನಡುಗಿಸುವಂತಿವೆ. ಆ ಘಟನೆಯ ಸಾಕ್ಷ್ಯಚಿತ್ರಗಳು ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟವು.
ಕೇವಲ ಘಟನೆಗಳನ್ನಷ್ಟೇ ಅಲ್ಲದೆ, ಗಂಗೆಯ ತೀರ, ಕಲ್ಕತ್ತಾದ ಬೀದಿಗಳು ಮತ್ತು ಸಾಮಾನ್ಯ ಭಾರತೀಯರ ಬದುಕಿನ ಭಾವನೆಗಳನ್ನು ಅವರು ಅತ್ಯಂತ ನೈಜವಾಗಿ ಚಿತ್ರಿಸುತ್ತಿದ್ದರು. ಅದಕ್ಕಾಗಿಯೇ ಅವರನ್ನು ಭಾರತದ ಆತ್ಮವನ್ನು ಚಿತ್ರಿಸಿದವರು ಎಂದು ಕರೆಯಲಾಗುತ್ತಿತ್ತು.