https://youtube.com/shorts/AWyQA9JMFI4?si=6teca9JBs0VZQurx
newsics.com
ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಸಣ್ಣ ಕಾರಣಕ್ಕಾಗಿ ಮೊಬೈಲ್ ಅಂಗಡಿ ಮಾಲೀಕ ಜಯರಾಜ್ ಮತ್ತು ಆತನ ಮಗ ಬೆನಿಕ್ಸ್ನನ್ನು ಅಕ್ರಮವಾಗಿ ಬಂಧಿಸಿ, ಅಮಾನವೀಯವಾಗಿ ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಇದಾದ ಸುಮಾರು ಆರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಇಂದು ಮಧುರೈನ ನ್ಯಾಯಾಲಯವು ಈ ಕೃತ್ಯವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಪರಿಗಣಿಸಿ, ತಪ್ಪಿತಸ್ಥ 9 ಪೊಲೀಸರಿಗೆ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ. 9 ಪೊಲೀಸರ ವಿರುದ್ಧ ದಿಟ್ಟತನದಿಂದ ಸಾಕ್ಷಿ ಹೇಳಿದ ಓರ್ವ ಸಾಮಾನ್ಯ ಮಹಿಳಾ ಕಾನ್ಸ್ಟೇಬಲ್ಗೆ ಸಲಾಂ ರೇವತಿ.
ಸಂತಾನಕುಲಂನಲ್ಲಿ ಜೈರಾಜ್ ಮತ್ತು ಬೆನ್ನಿಕ್ಸ್ ಎಂಬ ತಂದೆ-ಮಗನನ್ನು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಸ್ಟಡಿಗೆ ಪಡೆದ ಪೊಲೀಸ್ ಅಧಿಕಾರಿಗಳು, ತಮ್ಮ ಮಾತಿಗೆ ತಿರುಗೇಳಿದರು ಎಂಬ ಕ್ಷುಲಕ ಕಾರಣಕ್ಕೆ, ಜೈಲಿನೊಳಗೆ ಕಟ್ಟಿಹಾಕಿ, ಮನಬಂದಂತೆ ಥಳಿಸಿದ್ದಲ್ಲದೇ, ಕೋಲು, ಕಬ್ಬಿಣದ ರಾಡ್ಗಳಿಂದ ಚಿತ್ರಹಿಂಸೆ ನೀಡಿ, ಅವರ ಕೊಲೆಗೆ ಕಾರಣರಾದರು.
2020ರಲ್ಲಿ ಈ ಭೀಕರ ಘಟನೆ ನಡೆದಾಗ ರೇವತಿ, ಸಂತಾನಕುಲಂ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಕಾರ್ಯನಿರ್ವಹಿಸುತ್ತಿದ್ದರು. ಈ ದೌರ್ಜನ್ಯದಲ್ಲಿ ಭಾಗಿಯಾಗಿದ್ದ ಪೊಲೀಸರೆಲ್ಲರೂ ಪ್ರಭಾವಿ ವ್ಯಕ್ತಿಗಳೇ ಆಗಿದ್ದರು. ಆದರೆ, ರೇವತಿ ಮಾತ್ರ ತೀರ ಸಾಮಾನ್ಯ ಹಾಗೂ ಚಿಕ್ಕ ವಯಸ್ಸಿನ ಮಹಿಳಾ ಕಾನ್‌ಸ್ಟೆಬಲ್ ಆಗಿದ್ದರು.
ಈ ಪ್ರಕರಣವನ್ನು ಆರಂಭದಲ್ಲಿ ತನಿಖೆ ಮಾಡಿದ ಮ್ಯಾಜಿಸ್ಟ್ರೇಟ್ ಭಾರತಿದಾಸನ್, ಸಂತಾನಕುಲಂ ಪೊಲೀಸ್ ಠಾಣೆಗೆ ಬಂದಾಗ ಕಾನ್‌ಸ್ಟೆಬಲ್ ರೇವತಿ ಪ್ರಕರಣವನ್ನು ಬಿಚ್ಚಿಡಲು ಸಹಾಯ ಮಾಡಿದರು. ಕೇಸ್ಗೆ ಸಹಾಯಹಸ್ತ ನೀಡುವ ಮುನ್ನ ಅವರು ಕೇಳಿದ್ದು ಇಷ್ಟೇ. “ಸರ್, ನಾನು ನಿಮಗೆ ಎಲ್ಲವನ್ನೂ, ಪ್ರತಿಯೊಂದು ವಿವರವನ್ನು, ಮುಚ್ಚಿಟ್ಟಿರುವ ಸತ್ಯವನ್ನು ಪೂರ್ತಿಯಾಗಿ ಹೇಳುತ್ತೇನೆ. ಆದರೆ, ನಾನು ಇಬ್ಬರು ಪುಟ್ಟ ಹೆಣ್ಣುಮಕ್ಕಳ ತಾಯಿ. ನನ್ನ ಮಕ್ಕಳ ಸುರಕ್ಷತೆ ಮತ್ತು ಕೆಲಸದ ಸುರಕ್ಷತೆಯನ್ನು ನೀವು ಖಾತರಿಪಡಿಸಬಹುದೇ?” ಎಂದು ಮ್ಯಾಜಿಸ್ಟ್ರೇಟ್ ಬಳಿ ಕೇಳಿಕೊಂಡರು.
ಘಟನೆ ನಡೆಯುವ ದಿನ ರೇವತಿ ಅವರು ನೈಟ್ಶಿಫ್ಟ್ನಲ್ಲಿದ್ದರು. ಜಯರಾಜ್ ಮತ್ತು ಬೆನ್ನಿಕ್ಸ್ ಮೇಲೆ ನಡೆದ ಕ್ರೌರ್ಯವನ್ನು ತಮ್ಮ ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿದ್ದಾರೆ. ಎಸ್‌ಐ ಬಾಲಕೃಷ್ಣನ್, ಇನ್ಸ್‌ಪೆಕ್ಟರ್ ಶ್ರೀಧರ್ ಮತ್ತು ಎಸ್‌ಐ ರಗುಕನೆಸ್ ಅವರು ಕೈಗೆ ಸಿಕ್ಕ ವಸ್ತುಗಳಿಂದ ತಂದೆ ಮತ್ತು ಮಗನಿಗೆ ಹೊಡೆಯುತ್ತಿದ್ದರು. ಮತ್ತು ತಮ್ಮ ಬೂಟುಗಳಿಂದ ಅವರ ಖಾಸಗಿ ಭಾಗಗಳನ್ನು ತುಳಿದಿದ್ದರು ಎಂದು ವಿವರಿಸಿದ್ದಾಗಿ ವರದಿಯಾಗಿದೆ.
ಮೃತ ತಂದೆ-ಮಗ ನೋವಿನಿಂದ ನರಳಾಡುತ್ತಿರುವಾಗ ಅಧಿಕಾರಿಗಳು ಮದ್ಯ ಕುಡಿಯಲು ಆಗಾಗ್ಗೆ ವಿರಾಮ ತೆಗೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದವರಿಗೆ ನೀರು ಕೊಡುತ್ತಿದ್ದೆ. ಜಯರಾಜ್‌ಗೆ ಏನಾದರೂ ಬೇಕಾ ಎಂದು ಕೇಳಿ, ಬಳಿಕ ಕಾಫಿ ಕೊಟ್ಟಿದ್ದರು. ಆದರೆ, ಖಾಕಿಗಳು ಅದನ್ನು ಚೆಲ್ಲಿದ್ದಾಗಿ ಹೇಳಲಾಗಿದೆ. ಈ ಕ್ರೌರ್ಯವನ್ನು ಕಣ್ಣಾರೆ ಸಹಿಸಲಾಗದ ಮಹಿಳಾ ಕಾನ್ಸ್ಟೇಬಲ್ ಸುಮ್ಮನೆ ನಿಂತಿದ್ದರು.
ಇದಾದ ಬಳಿಕ ಬೆನ್ನಿಕ್ಸ್‌ನನ್ನು ಬೆತ್ತಲೆಯಾಗಿಸಿ, ಅವನ ಕೈ ಕಾಲುಗಳನ್ನು ಪ್ರತ್ಯೇಕವಾಗಿ ಕಟ್ಟಿ, ತಮ್ಮ ಬಳಿಯಿದ್ದ ಪೈಪು, ರಾಡ್ನಿಂದ ಹೊಡೆದಿದ್ದಾರೆ. ಅವರು ಜಯರಾಜ್‌ಗೂ ಅದೇ ರೀತಿ ಮಾಡಿದರು. ಇಬ್ಬರ ಕಿರುಚಾಟದ ನೋವನ್ನು ಸಹಿಸಲಾಗದೆ ರೇವತಿ ಸ್ಥಳದಿಂದ ಠಾಣೆಯಿಂದ ಹೊರನಡೆದಿದ್ದಾರೆ. ತನ್ನದೇ ಠಾಣೆಯ ಪೊಲೀಸರು ಸತ್ಯ, ಸಾಕ್ಷಿಗಳ ಬಗ್ಗೆ ಬಾಯ್ಬಿಡದಂತೆ ಬೆದರಿಕೆಯಿಟ್ಟರೂ ಸಹ ಅದ್ಯಾವುದಕ್ಕೂ ಬಗ್ಗದೆ ಇಂದು ಆರೋಪಿಗಳ ವಿರುದ್ಧ ಏಕಾಂಗಿ ಸಾಕ್ಷಿಯಾಗಿ ರೇವತಿ ನಿಂತದ್ದು ಸತ್ಯಕ್ಕೆ ಜಯ ತಂದುಕೊಟ್ಟಿದೆ. ಅಷ್ಟಕ್ಕೂ ಕಾನ್ಸ್ಟೇಬಲ್ ರೇವತಿ ಅವರು ಸತ್ಯದ ಪರವಾಗಿ ನಿಲ್ಲುವುದಾಗಿ ನಿರ್ಧರಿಸಿದ್ದರಿಂದ ಮಾತ್ರ ಇಷ್ಟೆಲ್ಲ ನಡೆಯಿತು. ಇಲ್ಲದಿದ್ದರೆ ಸತ್ಯ ಮಣ್ಣಿನಲ್ಲಿ ಮಣ್ಣಾಗುತ್ತಿತ್ತು. ಅದ್ಭುತ ಮಹಿಳೆ ಮತ್ತು ಖಾಕಿ ರೇವತಿ ಅವರಿಗೆ ದೇಶವ್ಯಾಪಿ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.
https://www.newsics.com/2026/04/08/young-doctor-resigns-just-one-day-after-joining-the-job/